

ಮಂಗಳೂರು: ಅಕ್ರಮ ಕಸಾಯಿ ಖಾನೆಗೆ ಬೆಳ್ಳಂಬೆಳಗ್ಗೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ಮಾಡಿ ವಧೆ ಮಾಡಲು ತಂದಿದ್ದ ನಾಲ್ಕು ಗೋವುಗಳನ್ನು ಹಾಗೂ ಭಾರೀ ಪ್ರಮಾಣದ ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಆಲಂಗಾರು ಬಳಿ ನಡೆದಿದೆ.
ಅಲಂಗಾರು ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂದ ಎಂಬಾತನಿಗೆ ಸೇರಿದ್ದ ಅಕ್ರಮ ಕಸಾಯಿ ಖಾನೆಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ದಾಳಿ ಮಾಡಿದ್ದಾರೆ. ಕಾರ್ಯಕರ್ತರು ತೋಟವನ್ನೆಲ್ಲಾ ಪರಿಶೀಲಿಸಿ ಅಗೆದು ನೋಡಿದಾಗ ದನದ ತಲೆಯ ಭಾಗಗಳು ಪತ್ತೆಯಾಗಿವೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಆರೋಪಿಗಳಾದ ಕ್ಲಾರಿನ್ ಅಲ್ವಿನ್ ಹಾಗೂ ಗಿಲ್ಬರ್ಟ್ ಮಿರಾಂದ ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಕಸಾಯಿಖಾನೆಯಲ್ಲಿದ್ದ ಅಪಾರ ಪ್ರಮಾಣದ ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.