ಮದುವೆ ಸಿದ್ಧತೆಯಲ್ಲಿದ್ದ ಯುವತಿಯ ಕತ್ತು ಸೀಳಿ ಪ್ರಾಣ ತೆಗೆದ ಸೈಕೋ ಕಿರಾತಕ!

ಯುವತಿಯ ಹತ್ಯೆ
Published on

ದಾವಣಗೆರೆ: ಸೈಕೋ ಕಿರಾತಕನೊಬ್ಬನ ಹುಚ್ಚುತನಕ್ಕೆ ಯುವತಿಯೊಬ್ಬಳು ಅಮಾನುಷವಾಗಿ ಕೊಲೆಯಾಗಿ ಹೋಗಿದ್ದಾಳೆ. ಮೃತಳ ಹೆಸರು ಚಾಂದ್ ಸುಲ್ತಾನ(28). ದಾವಣಗೆರಯ ವಿನೋಭ ನಗರದ ನಿವಾಸಿ ಚಾಂದ್ ಸುಲ್ತಾನ ಕಡುಬಡತನದಲ್ಲಿ ಹುಟ್ಟಿ ಕಷ್ಟ ಪಟ್ಟು ಓದಿ ಎಂಕಾಂ ಪದವಿ ಪಡೆದಿದ್ದಳು. ನಂತರ ನಗರದ ತೆರಿಗೆ ಸಲಹೆಗಾರ ಕೆ. ಮಹ್ಮದ್ ಭಾಷಾ ಕಡೆ ಸಿ.ಎ.ಗಾಗಿ ತೆರಬೇತಿ ಪಡೆಯುತ್ತಿದ್ದಳು.

ಪ್ರತಿಭಾವಂತ ಯುವತಿ ಚಾಂದ್​ ಸುಲ್ತಾನಾಳಿಗೆ ಮುಂದಿನ ತಿಂಗಳ ತನ್ನ ಸಹೋದ್ಯೋಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಮದುವೆ ಸಿದ್ಧತೆಯಲ್ಲಿದ್ದ ಯುವತಿಯನ್ನು ಸಾದತ್ ಅಲಿಯಾಸ್ ಚಾಂದ್ ಫೀರ್ ಎಂಬಾತ ಕೊಲೆ ಮಾಡಿದ್ದಾನೆ. ಚಾಂದ್ ಸುಲ್ತಾನಾಳನ್ನು ಮಾತನಾಡಿಸುವ ನೆಪದಲ್ಲಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಆರೋಪಿ ಸಾದತ್, ಮೃತ ಯುವತಿಗೆ ಸೋದರ ಸಂಬಂಧಿಯಾಗಿದ್ದ.

ಕಳೆದ ಐದು ವರ್ಷಗಳ ಹಿಂದೆ ಇವರಿಬ್ಬರಿಗೆ ಮದುವೆ ಮಾಡಲು ಮೃತ ಯುವತಿ ಮನೆಯವರು ನಿರ್ಧಾರ ಮಾಡಿದ್ದರು. ಅದರಂತೆ ಕೆಲ ಸಮಾಜದ ಮುಖಂಡರ ಸೇರಿ ಸಾದತ್ ಮನೆಗೆ ಹೋಗಿ ಆತನ ಕುಟುಂಬದ ಸದಸ್ಯರ ಬಳಿ ಮದುವೆ ಪ್ರಸ್ತಾಪಿಸಿದ್ದರು. ಈ ವೇಳೆ ಸಾದತ್ ಮತ್ತು ಆತನ ಮನೆಯವರು ಈ ಮದುವೆಗೆ ಸಮ್ಮತಿ ನೀಡಿರಲಿಲ್ಲ. ಕೊನೆಗೆ ನಮ್ಮ ಮಗಳನ್ನು ಬೇರೆ ಕಡೆ ಮದುವೆ ಮಾಡಿ ಕೊಡುತ್ತೆವೆ ಎಂದು ಮೃತ ಯುವತಿ ಮನೆಯವರು ಹೇಳಿದ್ದರು. ಇದಕ್ಕೆ ಸಾದತ್ ಮತ್ತು ಆತನ ಮನೆಯವರು ಒಪ್ಪಿಗೆಯನ್ನು ಸೂಚಿಸಿದ್ದರು. ಕೊನೆಗೆ ಮೃತೆ ಚಾಂದ್ ಸುಲ್ತಾನಾಳ ಮದುವೆಯನ್ನು ಆಕೆಯ ಸಹೋದ್ಯೋಗಿ ಜೊತೆ ನಿಶ್ಚಯಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಆರೋಪಿ ಸಾದತ್ ನೀನು ನನ್ನನ್ನೇ ಮದುವೆಯಾಗಬೇಕು ಅಂತ ಮೃತ ಯುವತಿ ಹಿಂದೆ ಬಿದ್ದಿದ್ದಾನೆ.ಈ ಬಗ್ಗೆ ಚಾಂದ್ ಸುಲ್ತಾನ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಮುಂದಿನ ತಿಂಗಳು ನಡೆಯಬೇಕಿದ್ದ ತನ್ನ ಮದುವೆಯತ್ತ ಗಮನಹರಿಸಿದ್ದಳು. ಆದರೆ ಇಂದು ಏಕಾಏಕಿ ಚಾಂದ್ ಸುಲ್ತಾನಾಳನ್ನು ಕತ್ತು ಸೀಳಿ, ಸಾದತ್ ಕೊಲೆ ಮಾಡಿದ್ದಾನೆ.

ಆರೋಪಿ ಸಾದತ್ ತನ್ನ ಮನೆಯಲ್ಲಿ ಚಾಂದ್ ಸುಲ್ತಾನಾಳನ್ನು ಕೊಲೆ ಮಾಡುವುದಾಗಿ ಹೇಳಿ ಹೋಗಿದ್ದ. ಈ ವಿಷಯವನ್ನು ಆರೋಪಿ ಕುಟುಂಬಸ್ಥರು ಚಾಂದ್ ಸಂಬಂಧಿಕರಿಗೆ ತಿಳಿಸಿದ್ದಾರೆ. ಆದರೆ ವಿಷಯ ಚಾಂದ್ ಸುಲ್ತಾನಾಳನ್ನು ತಲುಪುವ ಪ್ರಾಣ ಪಕ್ಷಿ ಹಾರಿ ಹೋಗಿದೆ. ಆರೋಪಿ ಸಾದತ್ ಕೊಲೆ ಮಾಡಿದ ನಂತರ ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಸದ್ಯ ಆರೋಪಿಗೆ ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬಡಾವಣೆ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net