

ಬೆಳಗಾವಿ: ತಾವೇ ಲಾರಿ ಅಪಘಾತ ಮಾಡಿ, ಅದರಲ್ಲಿ ಇದ್ದ 30 ಲಕ್ಷ ರೂ. ಮೌಲ್ಯದ ಮದ್ಯವನ್ನು ಸಿನಿಮೀಯ ರೀತಿಯಲ್ಲಿ ಲೂಟಿ ಮಾಡಿದವರು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬೆಳಗಾವಿಯ ರಾಯಬಾಗ ಕಂಪನಿಯಿಂದ ಬೀದರ್ನ ಗೊಡೌನ್ಗೆ ಒಂದು ಲಾರಿ ಲೋಡ್ನಷ್ಟು ಮದ್ಯವನ್ನು ಸಾಗಿಸಲಾಗುತ್ತಿತ್ತು. ಅದರಲ್ಲಿ 1100 ಮದ್ಯದ ಕಾರ್ಟನ್ಗಳು ಇದ್ದವು. ಆದರೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಕ್ರಾಸ್ ಬಳಿ ಡಿ.12ರಂದು ಈ ಲಾರಿ ತಗ್ಗಿನಲ್ಲಿ ಬಿದ್ದು ಅಪಘಾತವಾಗಿತ್ತು. ನಂತರ ಚಾಲಕ ಲಾರಿ ಅಪಘಾತವಾಗಿದೆ ಎಂದು ಹುಮನಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಚಾಲಕ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. 1100 ಮದ್ಯದ ಕಾರ್ಟನ್ಗಳ ಪೈಕಿ ಸುಮಾರು ಅರ್ಧದಷ್ಟು ಕಾರ್ಟನ್ಗಳು ಅಪಘಾತದ ಸ್ಥಳದಿಂದ ನಾಪತ್ತೆಯಾಗಿದ್ದವು. ತೀವ್ರವಾಗಿ ವಿಚಾರಣೆ ನಡೆಸಿದಾಗ ಲಾರಿ ಚಾಲಕ ನಿಜ ಸಂಗತಿ ಬಯಲು ಮಾಡಿದ್ದಾನೆ.
ಪೊಲೀಸ್ ವಿಚಾರಣೆಯ ವೇಳೆ ತನ್ನ ಸಹಚರರ ಜತೆ ಸೇರಿ ಮದ್ಯದ ಕಾರ್ಟನ್ಗಳನ್ನು ಸಮೀಪದ ಜಮೀನಿನಲ್ಲಿ ಗುಂಡಿ ತೋಡಿ ಮಣ್ಣಿನ ಕೆಳಗೆ ಮುಚ್ಚಿಟ್ಟಿರುವುದಾಗಿ ಲಾರಿ ಚಾಲಕ ಹೇಳಿದ್ದಾನೆ. ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಅಡಗಿಸಿಟ್ಟಿದ್ದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಲಾರಿ ಮಾಲೀಕ ಯಶವಂತ್, ಮುಸ್ತಫ, ಭೀಮಾಶಂಕರ, ಅಂಬರೀಶ್ ಸೇರಿದಂತೆ 10 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕಿಂಗ್ ಪಿನ್ ಆಕಾಶ್ ಸೇರಿದಂತೆ ನಾಲ್ವರು ನಾಪತ್ತೆಯಾಗಿದ್ದಾರೆ.