

ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿದ್ದಂತೆ ಪಬ್ಗಳಲ್ಲಿ ಪಾರ್ಟಿಗಳ ಸಂಖ್ಯೆ ಹೆಚ್ಚುತ್ತದೆ. ಪಾರ್ಟಿ ಹೆಸರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಯುವಕ ಯುವತಿಯರು ಮೋಜು, ಮಸ್ತಿಯಲ್ಲಿ ತೊಡಗುತ್ತಾರೆ. ಇದೀಗ ಭಜರಂಗದಳ ಸಂಘಟನೆಯವರು ಕಮೀಷನರ್ ಕಚೇರಿಗೆ ದೂರು ನೀಡಿದ್ದು, ಹೊಸ ವರ್ಷಕ್ಕೆ ಪಾರ್ಟಿ ಆಯೋಜನೆ ಹಿನ್ನೆಲೆಯಲ್ಲಿ ಮಾದಕ ವಸ್ತು ಪಾರ್ಟಿ ಹಾಗೂ ಅಶ್ಲೀಲ ಡಿ.ಜೆ ಡ್ಯಾನ್ಸ್ಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದೆ.
ಬಜರಂಗದಳದ ಸಂಯೋಜಕ ಗೋವರ್ಧನ್ಮಾತನಾಡುತ್ತಾ, ಯುವಕರನ್ನು ಮಾದಕ ವಸ್ತು ವ್ಯಸನಿಯನ್ನಾಗಿಸುವ ಸಲುವಾಗಿ ಹೊಸವರ್ಷದ ಸಂಭ್ರಮಾಚರಣೆ ಮಾಡಲಾಗುತ್ತದೆ. ಇದಕ್ಕಾಗಿ ಮಾದಕ ವಸ್ತಗಳ ಜಾಲದ ಮಾಫಿಯಾ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರಿಂದ ಯುವ ಸಮೂಹ ಸಮಾಜ ಘಾತುಕ ಶಕ್ತಿಗಳಾಗಿ ಬದಲಾಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪಬ್ಗಳಲ್ಲಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಪ್ರವೇಶ ಕೊಡಲಾಗುತ್ತಿದೆ. ಈ ವೇಳೆ ಹೆಣ್ಣು ಮಕ್ಕಳಿಗೆ ಸಿಂಥೆಟಿಕ್ ಡ್ರಗ್ಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನ ನೀಡಿ ವ್ಯಸನಿಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.