

ಮುಂಬೈ: ಸದ್ಯ ವೈಯಕ್ತಿಕ ಮತ್ತು ಸಿನಿ ವೃತ್ತಿಯಲ್ಲಿ ಉತ್ತಮ ಜೀವನ ಕಂಡುಕೊಂಡಿರುವ ಬಾಲಿವುಡ್ ನಟಿ ಸಂಜೀದಾ ಶೇಖ್ ಇದೀಗ 'ಹೀರಾಮಂದಿ' ಸಿರೀಸ್ನಲ್ಲಿ ವಾಹೀದಾ ಪಾತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಈ ಮಧ್ಯೆ 2021ರಲ್ಲಿ ತಮ್ಮ ಪತಿ ಅಮೀರ್ ಅಲಿಯಿಂದ ವಿಚ್ಛೇದನ ಪಡೆದಿದ್ದ ನಟಿ, ಮೂರು ವರ್ಷಗಳ ಬಳಿಕ ಈಗ ಡಿವೋರ್ಸ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಇದನ್ನೂ ಓದಿ: ಮಳೆರಾಯನ ಆರ್ಭಟಕ್ಕೆ ರೋಡ್ ಪೂರ್ತಿ ನೀರೋ ನೀರು!
2021ರಲ್ಲಿ ತಮ್ಮ ಪತಿ ಅಮೀರ್ ಅಲಿ ಜತೆಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ನಟಿ ಸಂಜೀದಾ, ಪರಸ್ಪರ ಒಪ್ಪಿಗೆ ಬಳಿಕ ವಿಚ್ಛೇದನ ಪಡೆದರು. ಇದಾದ ಬಳಿಕ ಎಲ್ಲಿಯೂ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡದ ನಟಿ, ಈ ಘಟನೆ ಆದ ನಂತರದ ದಿನಗಳಲ್ಲಿ ತಾನು ಎದುರಿಸಿದ ಸಂಕಷ್ಟ, ಒತ್ತಡ, ಅನುಭವಿಸಿದ ನೋವಿನ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
"ಡಿವೋರ್ಸ್ ಆದ ಬಳಿಕ ಬಹಳ ಕಷ್ಟಕರ ಜೀವನ ನೋಡಿದೆ. ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳದೆ, ಎಲ್ಲಾ ಕಠಿಣ ಹಂತಗಳನ್ನು ಎದುರಿಸಿದೆ. ಪ್ರತಿಯೊಂದು ವಿಷಯ ಅಥವಾ ಸಣ್ಣ-ಪುಟ್ಟ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುವ ವ್ಯಕ್ತಿ ನಾನಲ್ಲ. ಅದಕ್ಕೆಲ್ಲಾ ಕ್ಯಾಮರಾಗಳ ಅವಶ್ಯಕತೆಯೂ ನನಗಿಲ್ಲ. ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಲು ನನ್ನ ಫ್ಯಾಮಿಲಿ, ಸ್ನೇಹಿತರು ಇದ್ದಾರೆ. ನನ್ನಲ್ಲಿ ಏನಾಗುತ್ತಿದೆ, ಯಾವ ಸಂದರ್ಭದಲ್ಲಿ ಇದ್ದೀನಿ ಎಂಬುದನ್ನು ಹೇಳೋದಿಕ್ಕೆ ಅಣ್ಣ, ಅಕ್ಕ, ಅಮ್ಮ ಮತ್ತು ಮಗಳಿದ್ದಾರೆ. ಇಂದು ಈ ಪರಿಸ್ಥಿತಿಯನ್ನು ಎದುರಿಸಿ, ಗಟ್ಟಿಯಾಗಿ ನಿಂತಿರುವುದೇ ನನ್ನ ಮಗಳಿಂದ" ಎಂದು ಹೇಳಿದರು.
"ನನ್ನ ಮಗಳು ಕೊಟ್ಟಿರುವ ಆರ್ಶಿವಾದ ಮತ್ತು ಪ್ರೀತಿಯೇ ಇಂದು ನನಗೆ ಇಂತಹ ಕಠಿಣ ಪರಿಸ್ಥಿತಿಯಿಂದ ಹೊರಬರಲು ಶಕ್ತಿ. ಪತಿಯಿಂದ ವಿಚ್ಚೇದನ ಪಡೆದಾಗ ನನ್ನ ತಾಯಿ ಮಾಡಿದ ಸಹಾಯವನ್ನು ಈ ಜನ್ಮದಲ್ಲಿ ನಾನು ಮರೆಯಲು ಸಾಧ್ಯವಿಲ್ಲ. ಅವರಿಗೆ ಎಂದೆಂದಿಗೂ ನಾ ಚಿರಋಣಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).