VIDEO | ಕಣ್ತುಂಬಿಕೊಳ್ಳಿ ನೂತನ ಸಂಸತ್ ಭವನದ ಈ ಸೊಬಗ..

Parliament House
Published on

ನವದೆಹಲಿ: ದೇಶದ ಮಹತ್ವಾಕಾಂಕ್ಷೆಯ ಹಾಗೂ ಹೆಮ್ಮೆಯ ನೂತನ ಸಂಸತ್ ಭವನ ನಾಡಿದ್ದು ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದ್ದು, ಭವನದ ಸೊಬಗನ್ನು ಒಳಗೊಂಡ ವಿಡಿಯೋ ತುಣುಕೊಂದು ಬಿಡುಗಡೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರೇ ಈ ವಿಡಿಯೋ ಹಂಚಿಕೊಂಡಿದ್ದು, ಅದಕ್ಕೆ ಸಾರ್ವಜನಿಕರು ತಮ್ಮದೇ ವಾಯ್ಸ್​ಓವರ್​​ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಸಂಭ್ರಮಿಸುವ ಅವಕಾಶವನ್ನೂ ಕಲ್ಪಿಸಿದ್ದಾರೆ.

ವೀರ ಸಾರ್ವಕರ್ ಅವರ ಜನ್ಮದಿನವಾದ ಮೇ 28ರಂದು ಉದ್ಘಾಟನೆ ಆಗಲಿರುವ ಈ ಸಂಸತ್ ಭವನ ಹೇಗಿದೆ ಎಂಬ ಝಲಕ್ ಈ ವಿಡಿಯೋದಲ್ಲಿದೆ. ಈ ಸಂಸತ್ ಭವನ ನಿರ್ಮಾಣಕ್ಕೆ 2020ರ ಡಿ.10ರಂದು ಶಂಕುಸ್ಥಾಪನೆ ಮಾಡಲಾಗಿತ್ತು. ಆ ಬಳಿಕ ಕರೊನಾ ಸಾಂಕ್ರಾಮಿಕ ಪಿಡುಗು ಬಾಧಿಸಿದ್ದರೂ, ಸಂಸತ್ ಭವನದ ಭವ್ಯತೆಗೆ ಕಿಂಚಿತ್ತೂ ಲೋಪವಾಗದಂತೆ ಅದ್ಧೂರಿಯಾಗೇ ನಿರ್ಮಾಣವಾಗುವಂತೆ ಪ್ರಧಾನಿ ಮೋದಿ ಕ್ರಮಕೈಗೊಂಡಿದ್ದರು.

ತ್ರಿಕೋನಾಕಾರದ ನಾಲ್ಕಂತಸ್ತಿನ ಈ ಕಟ್ಟಡದ ವಿಸ್ತೀರ್ಣ 64,500 ಚದರ ಮೀಟರ್ ಆಗಿದ್ದು, ಇದರ ನಿರ್ಮಾಣಕ್ಕೆ ಬರೋಬ್ಬರಿ 1,200 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಈ ಭವನದ ಮೇಲೆ ರಾಷ್ಟ್ರೀಯ ಲಾಂಛನದ ಕಂಚಿನ ಪ್ರತಿರೂಪವಿದ್ದು, 6.5 ಮೀಟರ್ ಎತ್ತರದ ಇದರ ತೂಕವೇ 9500 ಕಿಲೋಗ್ರಾಂ ಇದೆ.

ಭವನಕ್ಕೆ ಒಂದಲ್ಲ, ಎರಡಲ್ಲ, ಮೂರು ಪ್ರವೇಶವಿದ್ದು, ಜ್ಞಾನದ್ವಾರ, ಶಕ್ತಿದ್ವಾರ, ಕರ್ಮದ್ವಾರ ಎಂದು ಒಂದೊಂದಕ್ಕೂ ವಿಶೇಷ ಹೆಸರು ಕೊಡಲಾಗಿದೆ. ಒಳಗೆ 1,280 ಸಂಸದರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಅದು ಒಪ್ಪವಾಗಿ ಜೋಡಿಸಿದಂತಿದೆ.

ಲೋಕಸಭೆ-ರಾಜ್ಯಸಭೆಯ ಸದಸ್ಯರ ಮೂಲಕ ದೇಶದ ಜನರ ಹಿತಕ್ಕಾಗಿ ಚಿಂತನೆ, ಚರ್ಚೆ, ಕಾನೂನು ರಚನೆ ಮುಂತಾದ ಧ್ಯೇಯದಿಂದ ನಿರ್ಮಿಸಲಾದ ಈ ಭವ್ಯ ಭವನದ ಸೊಬಗಿನ ವೀಕ್ಷಣೆಯೇ ಒಂದು ವೈಭೋಗ ಎಂದರೂ ಅತಿಶಯೋಕ್ತಿಯೇನಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net