

ನವದೆಹಲಿ: ಇಸ್ರೇಲ್ನಲ್ಲಿ ಹಮಾಸ್ ದಾಳಿಯಿಂದಾಗಿ ರಣಾಂಗಣ ಸೃಷ್ಟಿಯಾಗಿ ರಣಭೀಕರ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿನ ಪ್ರಕ್ಷುಬ್ಧ ವಾತಾವರಣ ಇನ್ನೂ ತಿಳಿಯಾಗಿಲ್ಲ. ಅದಾಗ್ಯೂ ಮತ್ತೆ ಮತ್ತೆ ಗುಂಡಿನ ಮೊರೆತ ಕೇಳುತ್ತಿದ್ದು, ಆತಂಕ ಮುಂದುವರಿದಿದೆ. ಈ ಮಧ್ಯೆ ಒಂದೊಂದೇ ದುರಂತಗಳು ಬಹಿರಂಗಗೊಳ್ಳುತ್ತಿವೆ.
ಹಮಾಸ್ ಉಗ್ರರ ದಾಳಿಯಿಂದಾಗಿ ನಲುಗಿರುವ ಇಸ್ರೇಲ್ನಲ್ಲಿನ ಭೀಕರ ಪರಿಸ್ಥಿತಿ, ಮೆರೆದ ಕ್ರೌರ್ಯಗಳ ಕುರಿತಂತೆ ಒಂದೊಂದೇ ಸಂಗತಿ ಹೊರಬೀಳುತ್ತಿದ್ದು, ಅಲ್ಲಿನ ಜನರು ಎದುರಿಸಿದ ಬರ್ಬರತೆ, ಅನುಭವಿಸಿದ ನೋವು-ಯಾತನೆಗಳು ಬಯಲಾಗುತ್ತಿವೆ.
ಅಂಥ ಒಂದು ಕರುಣಾಜನಕ ಸಂಗತಿಯೊಂದನ್ನು ಇಸ್ರೇಲ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ. ಐಟನ್ ಎಂಬ ಐದು ವರ್ಷದ ಬಾಲಕ ಆತನ ಹುಟ್ಟುಹಬ್ಬದ ಮುನ್ನಾದಿನವೇ ತಂದೆ-ತಾಯಿ, ಸೋದರಿ ಸಹಿತ ಹಮಾಸ್ ಉಗ್ರರಿಂದ ಹತ್ಯೆಗೀಡಾದ ವಿಷಯವನ್ನು ಇಸ್ರೇಲ್ ಹಂಚಿಕೊಂಡಿದೆ.
ಅ. 8ರಂದು ಐಟನ್ನ ಬರ್ತ್ಡೇ. ಅದರ ಸಲುವಾಗಿ ಆತನ ಪಾಲಕರು ತಮ್ಮ ಪುತ್ರಿ-ಪುತ್ರನನ್ನು ಕರೆದುಕೊಂಡು ದಕ್ಷಿಣ ಇಸ್ರೇಲ್ನ ಪ್ರದೇಶಕ್ಕೆ ಕ್ಯಾಂಪಿಂಗ್ ಹೋಗಿದ್ದರು. ದುರದೃಷ್ಟವಶಾತ್ ಅ. 7ರಂದು ನಡೆದ ಹಮಾಸ್ ಉಗ್ರರ ದಾಳಿಗೆ ಈ ಕುಟುಂಬ ಸಿಲುಕಿದ್ದು, ಅವರು ಐಟನ್, ಆತನ ಏಳು ವರ್ಷದ ಸಹೋದರಿ ಹಾಗೂ ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು.
ಮೊಮ್ಮಗನ ಬರ್ತ್ಡೇಗೆಂದು ಅಜ್ಜ-ಅಜ್ಜಿ ತಂದಿಟ್ಟಿದ್ದ ಉಡುಗೊರೆಯ ಗೊಂಬೆಗಳನ್ನು ಬಳಿಕ ಆತನ ಸಮಾಧಿ ಮೇಲಿಟ್ಟ ಚಿತ್ರವನ್ನು ಇಸ್ರೇಲ್ ಹಂಚಿಕೊಂಡಿದ್ದು, ಹಮಾಸ್ ದಾಳಿಯ ಭೀಕರತೆ ಹಾಗೂ ಅದರಿಂದಾದ ದುರಂತವನ್ನು ಅನಾವರಣಗೊಳಿಸಿದೆ.