ಆಕೆ ಇನ್ನಿಲ್ಲ ಎಂಬುದನ್ನು ಖಚಿತಪಡಿಸಿದ ಇಸ್ರೇಲ್​; ಆಕೆಯನ್ನು ಹಮಾಸ್ ಉಗ್ರರು ಅದೇನೇನು ಮಾಡಿದ್ದರೆಂದರೆ…

Shani Luk
Published on

ನವದೆಹಲಿ: ಇಸ್ರೇಲ್​ನಲ್ಲಿ ಹಮಾಸ್ ಉಗ್ರರು ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿ ವಿಕೃತವಾಗಿ ವರ್ತಿಸಿದ್ದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಅಲ್ಲಿ ಅಂದು ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದ ಜರ್ಮನ್-ಇಸ್ರೇಲಿ ಯುವತಿ, 23 ವರ್ಷದ ಶಾನಿ ಲುಕ್ ಇನ್ನಿಲ್ಲ ಎಂಬುದನ್ನು ಇಸ್ರೇಲ್​ ಇಂದು ಖಚಿತ ಪಡಿಸಿದೆ.

ಇಸ್ರೇಲ್ ವಿದೇಶಾಂಗ ಸಚಿವಾಲಯದ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಆಕೆಯ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ಆಕೆ ಮೃತಪಟ್ಟಿದ್ದನ್ನು ಕೂಡ ಖಚಿತ ಪಡಿಸಲಾಗಿದೆ. ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಅಂದು ಆಕೆಯನ್ನು ಅಪಹರಿಸಿ ಭೀಕರವಾಗಿ ಹಿಂಸಿಸಲಾಗಿದೆ ಎಂಬುದನ್ನೂ ಇಸ್ರೇಲ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಮಾತ್ರವಲ್ಲ, ಆಕೆಯ ಮೇಲೆ ಯಾವ ರೀತಿ ಕ್ರೌರ್ಯವನ್ನು ಮೆರೆಯಲಾಗಿದೆ ಎಂಬ ಸಂಗತಿ ಕೂಡ ಬಹಿರಂಗಗೊಂಡಿದ್ದು, ಆ ಕುರಿತ ಮಾಹಿತಿಯನ್ನು ಇಸ್ರೇಲ್​ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಹಂಚಿಕೊಳ್ಳಲಾಗಿದೆ.

ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದ ಶಾನಿಯನ್ನು ಅಂದು ದಾಳಿ ಮಾಡಿದ್ದ ಹಮಾಸ್ ಉಗ್ರರು ಪಿಕಪ್ ವಾಹನದಲ್ಲಿ ತಲೆ ಕೆಳಗಾಗಿಸಿಕೊಂಡು ಕರೆದೊಯ್ದಿದ್ದರು. ಆಕೆಯನ್ನು ಬೆತ್ತಲೆಗೊಳಿಸಲಾಗಿದ್ದು, ಆಕೆಯ ಕಾಲು ಭಯಂಕರವಾಗಿ ಮುರಿತಕ್ಕೆ ಒಳಗಾಗಿತ್ತು.

ಹಮಾಸ್ ಉಗ್ರರ ಗುಂಪು ಆಕೆಯನ್ನು ಗಾಜಾದ ತುಂಬಾ ಮೆರವಣಿಗೆ ರೀತಿ ಕೊಂಡೊಯ್ದಿದ್ದು, ಈ ವೇಳೆ ಆಕೆಯ ಮೇಲೆ ಅವರು ಉಗುಳಿ, ಆಕೆಯ ದೇಹವನ್ನು ಮುಟ್ಟಿ ವಿಕೃತವಾಗಿ ವರ್ತಿಸಿದ್ದರು. ಆಕೆಯನ್ನು ಭಾಗಶಃ ಶಿರಚ್ಛೇದಕ್ಕೆ ಒಳಗಾಗಿಸಿದ್ದು, ಅವಳ ತಲೆಬುರುಡೆಯ ಭಾಗಗಳು ಸಿಕ್ಕಿವೆ.

ಪ್ರಯೋಗಾಲಯದ ವರದಿ ಹಾಗೂ ತಜ್ಞರ ನಿರ್ಣಯದ ಪ್ರಕಾರ ಆಕೆಯ ಕೊಲೆ ಖಚಿತಗೊಂಡಿದ್ದು, ಸಂಬಂಧಿಕರಿಗೆ ಆಕೆಯ ಸಾವಿನ ಕುರಿತ ಸಂದೇಶ ರವಾನಿಸಲಾಗಿದೆ. ಆಕೆಯ ದೇಹ ಇನ್ನೂ ಹಮಾಸ್ ಉಗ್ರರ ಬಳಿ ಇದ್ದು, ಗಾಜಾದ ಇನ್ನೂ 228 ಮಂದಿ ಅವರಲ್ಲಿ ಒತ್ತೆಯಾಳಾಗಿದ್ದಾರೆ ಎಂಬ ಮಾಹಿತಿ ಇಸ್ರೇಲ್​ ಎಕ್ಸ್ ಹ್ಯಾಂಡಲ್​ನಲ್ಲಿ ರಿಪೋಸ್ಟ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net