

ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶಕ್ಕೆ ಮಂಗಳ ವಾರ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಆ ಮೂಲಕ ಸರ್ಕಾರದ ಹೊರಡಿಸಿದ್ದ ಸುಗ್ರೀವಾಜ್ಞೆ ಜಾರಿಗೆ ಬಂದಿದೆ. ಇದರಿಂದಾಗಿ ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಅಧಿನಿಯಮ 1964 ನಿರಸನಗೊಂಡಂತಾಗಿದೆ. ಹೊಸ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಕಳೆದ ವಾರ ನಡೆದ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಪ್ರಸ್ತಾಪ ಮಾಡಿದ್ದ ಸರ್ಕಾರ, 3 ದಿನದ ಬಳಿಕ ರಾಜ್ಯಪಾಲರ ಸಹಿಗಾಗಿ ಕಳಿಸಿತ್ತು. ಮುಂದಿನ ಪ್ರಕ್ರಿಯೆಯಾಗಿ ವಿಧಾನ ಮಂಡಲದಲ್ಲಿ ಮರು ಮಂಡನೆ ಮಾಡಿ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ಇನ್ನು ಮುಂದೆ ಕಾನೂನಿಗೆ ವಿರುದ್ಧವಾಗಿ ಯಾವೊಬ್ಬ ವ್ಯಕ್ತಿಯು ಜಾನುವಾರು ಹತ್ಯೆ ನಡೆಸತಕ್ಕದ್ದಲ್ಲ ಅಥವಾ ಜಾನುವಾರು ಹತ್ಯೆಗೆ ಕೊಡುವಂತಿಲ್ಲ. ಈ ಕಾರಣಕ್ಕೆ ಖರೀದಿಸುವುದು, ಮಾರಾಟಕ್ಕೂ ಅವಕಾಶವಿಲ್ಲ ಅಥವಾ ಜಾನುವಾರನ್ನು ಉದ್ದೇಶಪೂರ್ವಕವಾಗಿ ಕೊಲ್ಲಲು ಅವಕಾಶವಿಲ್ಲ. ಅಷ್ಟೇ ಅಲ್ಲ ಯಾವೊಬ್ಬ ವ್ಯಕ್ತಿ ಜಾನುವಾರುಗಳನ್ನು ರಾಜ್ಯದೊಳಗೆ ಹತ್ಯೆಗಾಗಿ ಸಾಗಾಣಿಕೆ ಮಾಡಲು ಅವಕಾಶವಿಲ್ಲ. ಹೊರ ರಾಜ್ಯಕ್ಕೂ ಹತ್ಯೆ ಉದ್ದೇಶಕ್ಕೆ ಸಾಗಾಣಿಕೆಗೆ ಅನುಮತಿ ಇಲ್ಲ. ಆದರೆ, ನಂಬಿಕಸ್ಥ ಕೃಷಿ ಅಥವಾ ಪಶು ಸಂಗೋಪನೆ ಉದ್ದೇಶಗಳಿಗಾಗಿ ಜಾನುವಾರು ಸಾಗಾಣಿಕೆಗೆ ಸಕ್ಷಮ ಪ್ರಾಧಿಕಾರಿಯು ಪರ್ವಿುಟ್ ನೀಡಬಹುದು.
ಗೋವನ್ನು ಯಾವುದೇ ವಿಧದಿಂದ ಕೊಲ್ಲುವುದು, ಸಾವಿಗೆ ಕಾರಣವಾಗುವ ದೈಹಿಕ ಹಾನಿಯ ಊನಗೊಳಿಸುವಿಕೆ ಮತ್ತು ಗಾಯಗೊಳಿಸುವಿಕೆಗೂ ಅವಕಾಶವಿಲ್ಲ. ಸಬ್ ಇನ್ಸ್ಪೆಕ್ಟರ್ ದರ್ಜೆಗಿಂತ ಕಡಿಮೆ ಇಲ್ಲದ ಒಬ್ಬ ಪೊಲೀಸ್ ಅಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಿ ತನಿಖೆ ಮಾಡಲು, ಅಪರಾಧ ಮಾಡಿದ ಅಥವಾ ಅಪರಾಧ ಮಾಡಲು ಬಳಸಲು ಉದ್ದೇಶಿಸಿದ್ದ ಆವರಣ, ಸಾಮಗ್ರಿ ಜಪ್ತಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯ ಸರ್ಕಾರವು ಜಾನುವಾರುಗಳ ಪೋಷಣೆಯನ್ನು ಕೈಗೊಳ್ಳುವುದಕ್ಕೆ ಅಗತ್ಯವೆಂದು ಭಾವಿಸಬಹುದಾದ ಸ್ಥಳಗಳಲ್ಲಿ ಗೋಶಾಲೆ ತೆರೆಯುವುದು ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಸೂಚಿಸಲೂಬಹುದು. ನೊಂದಾಯಿತ ಸೊಸೈಟಿ ಅಥವಾ ಸಂಸ್ಥೆ, ಸಂಘಕ್ಕೆ ಅನುಮತಿ ನೀಡಲಾಗುತ್ತದೆ.
ಮುಂದೇನು?: ಈ ಅಧ್ಯಾದೇಶದ ಅನ್ವಯ ಸಕ್ರಮ ಪ್ರಾಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಕಂದಾಯ ತಾಲೂಕಿನ ತಹಶೀಲ್ದಾರ್ ಅಥವಾ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪಶು ವೈದ್ಯಾಧಿಕಾರಿ ದರ್ಜೆಗೆ ಕಡಿಮೆ ಇಲ್ಲದ ಅಧಿಕಾರಿ ಸ್ಥಳೀಯ ಪ್ರದೇಶಕ್ಕೆ ಸಕ್ಷಮ ಪ್ರಾಧಿಕಾರಿಯಾಗಿರುತ್ತಾರೆ. ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಲಿದೆ.