

ಇಡುಕ್ಕಿ: ಕೇರಳದ ಪಲ್ಲಿವಾಸಲ್ ಪವರ್ ಹೌಸ್ ಬಳಿ ದ್ವಿತೀಯ ಪಿಯು ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ ಆರೋಪಿಯ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಪತ್ತೆಯಾಗಿದೆ.
ಮೃತನನ್ನು ಅರುಣ್ ಅಲಿಯಾಸ್ ಅನು ಎಂದು ಗುರುತಿಸಲಾಗಿದೆ. ಈತ ಕೊಲೆಯಾದ ಯುವತಿಯ ಸಂಬಂಧಿಯು ಹೌದು. ಮೃತದೇಹವು ಯುವತಿ ಕೊಲೆ ನಡೆದ ಸ್ಥಳದಿಂದ ಒಂದು ಕಿ.ಮೀ ಅಂತರದಲ್ಲಿ ಪತ್ತೆಯಾಗಿದೆ.
ಯುವತಿ ಕೊಲೆಯಾದ ದಿನದಿಂದ ನಾಲ್ಕು ದಿನಗಳವರೆಗೆ ಆರೋಪಿ ಅರುಣ್ಗಾಗಿ ಪೊಲೀಸರು ಸುತ್ತಾಮುತ್ತಾ ಸಾಕಷ್ಟು ಹುಡುಕಾಡಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಆದರೆ, ಮಂಗಳವಾರ ಬೆಳಗ್ಗೆ ಸ್ಥಳೀಯರು ಅರುಣ್ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಅರುಣ್ಗೆ ಸಂಬಂಧಿಸಿದ ಕೆಲವು ಪತ್ರಗಳನ್ನು ಅವರ ಮನೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಯುವತಿ ಮತ್ತು ಅರುಣ್ ಇಬ್ಬರು ಸಂಬಂಧದಲ್ಲಿದ್ದರು ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಯುವತಿ ಕೊಲೆಯಾದ ಸ್ಥಳದಲ್ಲಿ ಅರುಣ್ ಮೊಬೈಲ್ ಪತ್ತೆಯಾಗಿತ್ತು. ಪ್ರಾಥಮಿಕ ವರದಿಯ ಪ್ರಕಾರ ಯುವತಿಯನ್ನು ಅರುಣ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆನ್ನಲಾಗಿದೆ.
ಕೊಲೆಯಾದ ಯುವತಿಯನ್ನು ರೇಷ್ಮಾ ಎಂದು ಗುರುತಿಸಲಾಗಿದೆ. ಈಕೆ ದ್ವಿತೀಯ ಪಿಯು ವಿದ್ಯಾರ್ಥಿನಿ. ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದಳು. ಬಳಿಕ ಪಾಲಕರು ವೆಲ್ಲಥೋವಲ್ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕಾಲೇಜಿಗೆ ಹೋದವಳು ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರಿಗೆ ಯುವತಿಯನ್ನು ಅರುಣ್ ಜತೆ ನೋಡಿದ್ದಾಗಿ ಕೆಲ ಸ್ಥಳೀಯರು ಮಾಹಿತಿ ನೀಡಿದರು. ರೇಷ್ಮಾ ತಂದೆಗೆ ಸ್ನೇಹಿತರು ಸಹ ಅರುಣ್ ಜತೆ ನೋಡಿದ್ದಾಗಿ ಹೇಳಿದ್ದರು. ಇದೇ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದಾಗ ರೇಷ್ಮಾ ಮೃತದೇಹ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಅರುಣ್ ಮೃತದೇಹ ಸಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ