

ಹೈದರಾಬಾದ್: 125 ವರ್ಷದ ಗ್ಯಾಲಪಗೋಸ್ ದೈತ್ಯ ಆಮೆ ವಯೋಸಹಜ ಖಾಯಿಲೆಯಿಂದ ಶನಿವಾರ (ಮಾ.16) ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 125 ವರ್ಷ ವಯಸ್ಸಿನ ಗಂಡು ಆಮೆ ಇದಾಗಿದ್ದು, ವೃದ್ಧಾಪ್ಯದ ತೊಂದರೆಗಳಿಂದ ಸಾವನ್ನಪ್ಪಿದೆ.
ಕಳೆದ 10 ದಿನಗಳಿಂದ ಆಮೆ ಆಹಾರದಿಂದ ದೂರವಿತ್ತು ಎಂದು ನೆಹರು ಝೂಲಾಜಿಕಲ್ ಪಾರ್ಕ್ ತಿಳಿಸಿದ್ದು, ಮೃಗಾಲಯದ ಪಶುವೈದ್ಯಕೀಯ ತಂಡವು 10 ದಿನಗಳಿಂದ ಪ್ರಾಣಿಗೆ ಚಿಕಿತ್ಸೆ ನೀಡುತ್ತಿತ್ತು ಎಂದು ಪ್ರಕಟಣೆ ತಿಳಿಸಿದೆ. ಈ ಆಮೆಯನ್ನು ಮೃಗಾಲಯದ ಅತ್ಯಂತ ಹಳೆಯ ನಿವಾಸಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಮೃಗಾಲಯ ಉದ್ಘಾಟನೆಯಾದಾಗಿನಿಂದ 95 ವರ್ಷದ ಮತ್ತೊಂದು ಆಮೆಯೊಂದಿಗೆ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ಈ ಆಮೆಯೂ 1963ರಲ್ಲಿ ನಗರದ ಸಾರ್ವಜನಿಕ ಉದ್ಯಾನವನದಿಂದ ಸ್ಥಳಾಂತರಿಸಲಾಯಿತು, ನಂತರ ಅದನ್ನು ನೆಹರು ಝೂಲಾಜಿಕಲ್ ಪಾರ್ಕ್‌ಗೆ ವರ್ಗಾವಣೆ ಮಾಡಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆಮೆ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆಗಾಗಿ ಮಾದರಿಗಳನ್ನು ರಾಜೇಂದ್ರನಗರದ ವಿಬಿಆರ್‌ಐ ಮತ್ತು ಪಶುವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ,(ಏಜೆನ್ಸೀಸ್).