'ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ'; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

WhatsApp Image 2024-03-16 at 6.49.58 PM
Published on

ಮುಂಬೈ: ಭಾರತ ಕ್ರಿಕೆಟ್​ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಇದೀಗ ಮುಂಬರುವ ಐಪಿಎಲ್ 2024ರ ಆವೃತ್ತಿಗೆ ಸಜ್ಜಾಗುತ್ತಿದ್ದು, ರಾಜಸ್ಥಾನ ರಾಯಲ್ಸ್​ ತಂಡದ ಪರವಾಗಿ ಆಡುವ ಮೂಲಕ ಇಂಡಿಯನ್​ ಪ್ರೀಮಿಯರ್ ಲೀಗ್ 2024ರಲ್ಲಿ ಅದ್ದೂರಿ ಪ್ರದರ್ಶನ ನೀಡಲು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಅವರ ಪತ್ನಿ ಧನಶ್ರೀ ವರ್ಮಾರನ್ನು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ಅದರ ಹಿಂದಿರುವ ಕಾರಣ ಹೀಗಿದೆ.

ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ತಮ್ಮ ಸ್ನೇಹಿತರಾದ ನೃತ್ಯ ನಿರ್ದೇಶಕ ಪ್ರತೀಕ್ ಉಟೇಕರ್ ಅವರೊಂದಿಗೆ ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಫೋಟೋ ಹರಿದಾಡಿದ ಬೆನ್ನಲ್ಲೇ ಚಹಲ್​ ಪತ್ನಿಯನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು, ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಟೀಕಿಸಿದ್ದರು. ಸದ್ಯ ಈ ಕುರಿತು ಮೌನ ಮುರಿದಿರುವ ಧನಶ್ರೀ, ಇದು ತನ್ನ ಕುಟುಂಬಕ್ಕೆ ತುಂಬ ಘಾಸಿಮಾಡಿದೆ ಎಂದು ಹೇಳಿದ್ದಾರೆ.

ಪ್ರತೀಕ್ ಮತ್ತು ಧನಶ್ರೀ ಅವರ ಫೋಟೋ ವೈರಲ್ ಆಗುತ್ತಿದ್ದಂತೆ ಕಮೆಂಟ್ ಮುಖೇನ ಟೀಕಿಸಿದ್ದ ನೆಟ್ಟಿಗರು, ‘ಯುಜ್ವೇಂದ್ರ ಚಹಲ್ ನೆನಪಿಸಿಕೊಂಡರೆ ಪಾಪ ಅನಿಸುತ್ತೆ’, ‘ಫ್ರೆಂಡ್ ಆಗಿರಲಿ, ಯಾರೇ ಆಗಿರಲಿ ಮತ್ತೊಬ್ಬರ ಪತ್ನಿಯಾದ ಮೇಲೆ ನಿಮ್ಮ ಜವಾಬ್ದಾರಿಗಳು ನಿಮಗೆ ನೆನಪಿರಬೇಕು’ ಎಂದೆಲ್ಲಾ ಅಭಿಪ್ರಾಯಿಸಿದ್ದರು. ಕಮೆಂಟ್​ಗಳ ಸುರಿಮಳೆಯ ಬೆನ್ನಲ್ಲೇ ಪ್ರತೀಕ್ ತಮ್ಮ ಪೋಸ್ಟ್‌ನಲ್ಲಿನ ಕಾಮೆಂಟ್‌ ಆಯ್ಕೆಯನ್ನು ಮುಚ್ಚಿದ್ದರು.

ತನ್ನ ವಿರುದ್ಧದ ಟ್ರೋಲ್​ಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡ ಧನಶ್ರೀ, ಸೋಷಿಯಲ್ ಮೀಡಿಯಾದಲ್ಲಿ ನೀವು ಮಾಡಿದ ಕಮೆಂಟ್​ಗಳು ನನ್ನ ಕುಟುಂಬಕ್ಕೆ ತುಂಬ ನೋವುಂಟು ಮಾಡಿದೆ. ಇದು ಬಹಳ ಪರಿಣಾಮ ಬೀರಿದೆ. ನಾನು ನನ್ನ ಇನ್‌ಸ್ಟಾಗ್ರಾಮ್ ಓಪನ್ ಮಾಡುವ ಮುನ್ನ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು. ಟ್ರೋಲ್​, ಕಮೆಂಟ್​ಗಳಿಂದ ನಾನು ಯಾವತ್ತು ಕುಸಿದಿಲ್ಲ ಎಂದರು.

ಆದರೆ, ಇದೇ ಮೊದಲ ಬಾರಿಗೆ ಇದು ನನಗೆ ತುಂಬ ನೋವನ್ನು ಉಂಟು ಮಾಡಿತು. ಯಾಕಂದ್ರೆ ಅದೆಲ್ಲವೂ ನನ್ನ ಕುಟುಂಬ, ಅತ್ಯಾಪ್ತರಿಗೆ ಘಾಸಿ ಮಾಡಿದ್ದರಿಂದ ಮಾತ್ರ. ಹಾಗಾಗಿ, ಕೆಲವು ದಿನಗಳಿಂದ ಇದೆಲ್ಲದರಿಂದ ದೂರ ಉಳಿಯುವುದು ಸರಿ ಅನಿಸಿತು. ನಿಮ್ಮ ಅನಿಸಿಕೆ ಅಥವಾ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವ ಸ್ವಾತಂತ್ರ್ಯ ನಿಮಗಿರುವುದರಿಂದ ಇತರರ ಭಾವನೆಗಳನ್ನು ಮರೆತು ಕಮೆಂಟ್ ಮಾಡುತ್ತೀರಿ ಎಂದರು.

"ಇನ್ಮುಂದೆ ನೀವೆಲ್ಲ ಕಮೆಂಟ್ ಮಾಡುವಾಗ ಸ್ವಲ್ಪ ಹೆಚ್ಚು ಸೂಕ್ಷ್ಮವಾಗಿರಿ ಎಂದು ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ" ಎಂದು ಧನಶ್ರೀ ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಕೂಡ ವ್ಯಾಪಕವಾಗಿ ಹರಿದಾಡುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net