More

    ಕಾಲುದಾರಿಯಲ್ಲೇ ಜನ ಸಂಚಾರ: ಬೆಳ್ಳೇರಿ ಗ್ರಾಮಸ್ಥರ ಪರದಾಟ

    ವಿಜಯವಾಣಿ ಸುದ್ದಿಜಾಲ ಉಳ್ಳಾಲ

    ಭಾರತಕ್ಕೆ ಸ್ವಾತಂತ್ರೃ ಸಿಕ್ಕಿ ಇಷ್ಟು ವರ್ಷಗಳಾದರೂ ಇಲ್ಲೊಂದು ಊರಿನ ಜನ ರಸ್ತೆಯನ್ನೇ ಕಂಡಿಲ್ಲ. ಇಲ್ಲಿ ವಾಸವಿರುವವರು ಸಂಬಂಧಿಕರೊಂದಿಗೆ ದೂರ ಇದ್ದಾರೆ. ಇಂಥದ್ದೊಂದು ಊರು ಉಳ್ಳಾಲ ತಾಲೂಕಿನಲ್ಲಿದೆ ಎನ್ನುವುದು ಸತ್ಯ!

    ಇದು ಉಳ್ಳಾಲ ತಾಲೂಕು ವ್ಯಾಪ್ತಿಯ ಬಾಳೆಪುಣಿ ಗ್ರಾಮದ ಬೆಳ್ಳೇರಿ ಎನ್ನುವ ಊರಿನ ಜನರ ವ್ಯಥೆ. ಪಂಚಾಯಿತಿ ಮುಂಭಾದದಲ್ಲಿರುವ ಸಣ್ಣದೊಂದು ಕಾಲುದಾರಿಯಲ್ಲಿ ಕ್ರಮಿಸಿದರೆ ಬೆಳ್ಳೇರಿ ಸಿಗುತ್ತದೆ.

    ಈ ಭಾಗದಲ್ಲಿ 12 ಮನೆಗಳಿದ್ದು ಶಾಲೆಗೆ ಹೋಗುವ ಹತ್ತರಷ್ಟು ಮಕ್ಕಳಿದ್ದಾರೆ. ಕಾಡಿನಿಂದಾವೃತ್ತವಾಗಿರುವ ತೀರ ಇಳಿಜಾರಿನಿಂದ ಕೂಡಿದ ಪ್ರದೇಶ ಇದಾಗಿದ್ದು ಇಕ್ಕಟ್ಟಿನಿಂದ ಕೂಡಿದ ಸಣ್ಣ ಕಾಲುದಾರಿ ನಡುವೆ ಸಿಗುವ ಮೆಟ್ಟಿಲು ಸ್ಥಳೀಯ ನಿವಾಸಿಗರಿಗೆ ಆಶ್ರಯ.

    ಮನೆಗಳಿಗೆ ತಲುಪುವಾಗ ಇಳಿಜಾರು ಸಿಗುತ್ತಿದ್ದು ಜಾರಿಕೊಂಡು ಎದ್ದು ಬಿದ್ದು ಮನೆ ತಲುಪಬೇಕು. ಅಗತ್ಯ ಕಾರ್ಯಗಳ ನಿಮಿತ್ತ ಮುಖ್ಯ ರಸ್ತೆಗೆ ಹೋಗಬೇಕಾದರೆ ಎತ್ತರಕ್ಕೇರಬೇಕಿದ್ದು ಏದುಸಿರು ಬಿಡುತ್ತಲೇ ಅಲ್ಲಲ್ಲಿ ನಿಂತು ಹೋಗಬೇಕಾದ ದುಸ್ಥಿತಿ. ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ ಇರುವವರಂತೂ ಮುಖ್ಯ ರಸ್ತೆ ತಲುಪಿದಾಗ ಜೀವಂತ ಇದ್ದರೆ ಅದೇ ಪುಣ್ಯ!


    ಈ ರಸ್ತೆಗೆ ಬಾಳೆಪುಣಿ ಗ್ರಾಪಂ 15ನೇ ಹಣಕಾಸು ಯೋಜನೆಯಡಿ ಒಂದು ಸೋಲಾರ್ ದೀಪ ಅಳವಡಿಸಿದ್ದರೆ, 2022-23ನೇ ಸಾಲಿನಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರ ಮೂರು ಲಕ್ಷ ರೂ. ಅನುದಾನದಲ್ಲಿ ಸೋಲಾರ್ ದೀಪ ಅಳವಡಿಸಲಾಗಿದೆ.

    ಸ್ಥಳೀಯರಿಗೆ ಕಾಯಿಲೆ ಬಂದಾಗ ಮುಖ್ಯ ರಸ್ತೆಯವರೆಗೆ ಎತ್ತಿಕೊಂಡು ಹೋಗಬೇಕು. ಆದರೆ ಇದು ಸಾಧ್ಯವಿರುವ ಬಲಾಢ್ಯರನ್ನು ಹುಡುಕುವುದೇ ಕಷ್ಟ. ಸ್ಥಳೀಯ ಮನೆಗಳಿಗೆ ಸಂಬಂಧಿಕರೇ ಬರದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದಾಗಿ ಒಂಟಿತನ ಅನುಭವಿಸುತ್ತಿರುವ ಕುಟುಂಬಗಳು ಮಕ್ಕಳ ಮುಂದಿನ ಭವಿಷ್ಯದ ಚಿಂತೆಗೆ ಸಿಲುಕಿದ್ದಾರೆ. ಈ ಬಗ್ಗೆ ಬಾಳೆಪುಣಿ ಗ್ರಾಪಂ ಮಾಜಿ ಸದಸ್ಯೆ ಪ್ರೇಮಾ ಜನಶಿಕ್ಷಣ ಟ್ರಸ್ಟ್ ಗಮನಕ್ಕೆ ತಂದಿದ್ದು, ಟ್ರಸ್ಟ್‌ನಿಂದ ಗ್ರಾಪಂಗೆ ಪತ್ರ ಬರೆಯಲಾಗಿದೆ. ರಾಜಕಾರಣಿಗಳು, ಜನಪ್ರತಿನಿಧಿಗಳ ಕೃಪಾಕಟಾಕ್ಷದ ನಿರೀಕ್ಷೆಯಲ್ಲಿದ್ದಾರೆ.

    ತಂದೆಯವರ ಕಾಲದಲ್ಲೂ ಹೀಗೆಯೇ ಇತ್ತು, ತಂದೆಗೆ ಅನಾರೋಗ್ಯ ಕಾಡಿದಾಗ ಹೊತ್ತುಕೊಂಡು ಹೋಗಿದ್ದೆವು, ನಮಗೆ ಅಂಥ ಪರಿಸ್ಥಿತಿ ಬಂದರೆ ಹೊತ್ತುಕೊಂಡು ಹೋಗಲು ಜನರೂ ಸಿಗಲಿಕ್ಕಿಲ್ಲ. ಮಕ್ಕಳ ಕಾಲದಲ್ಲಾದರೂ ರಸ್ತೆ ರಚನೆಯಾಗಲಿ.

    -ಸುಂದರ ಮೂಲ್ಯ, ಬೆಳ್ಳೇರಿ ನಿವಾಸಿ

    ಹಲವು ವರ್ಷಗಳ ಬೇಡಿಕೆಯಾಗಿದ್ದ ನವಗ್ರಾಮ ಮತ್ತು ಮುದುಂಗಾರುಕಟ್ಟೆ ಅರಂತಾಡಿ ಗುಂಡಿಹಿತ್ಲು ರಸ್ತೆಗೆ ಸಾಕಷ್ಟು ತಕರಾರು ಇದ್ದರೂ ಅದನ್ನು ಗ್ರಾಪಂ ಸಹಕಾರದಲ್ಲಿ ನಿರ್ಮಿಸಲಾಗಿದೆ. ಅದೇ ರೀತಿ ಬೆಳ್ಳೇರಿಗೂ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಪಂಚಾಯಿತಿ ಸದಸ್ಯರಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

    -ವೆಂಕಟೇಶ್
    ಬಾಳೆಪುಣಿ ಗ್ರಾಪಂ ಅಭಿವೃದ್ಧಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts