More

    ಕಣಚೂರು ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ

    ವಿಜಯವಾಣಿ ಸುದ್ದಿಜಾಲ ಉಳ್ಳಾಲ

    ಮಕ್ಕಳಿಗೆ ಹೆತ್ತವರು ನೀಡುವ ಕೊಡುಗೆ ಶಿಕ್ಷಣಕ್ಕಿಂತ ದೊಡ್ಡದು ಇನ್ನೊಂದಿಲ್ಲ. ಒಂದು ಕುಟುಂಬದಲ್ಲಿ ಪುರುಷರು ಶಿಕ್ಷಣ ಪಡೆದರೆ ಅವರಿಗೆ ಮಾತ್ರ ಸೀಮಿತ, ಹೆಣ್ಮಕ್ಕಳು ಶಿಕ್ಷಣ ಪಡೆದರೆ ಅದರಿಂದ ಇಡೀ ಕುಟುಂಬಕ್ಕೇ ಪ್ರಯೋಜನ ಆಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಹೆಣ್ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಆವಶ್ಯಕತೆ ಇದೆ ಎಂದು ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಳ್ಳಾಲ್ ಅಭಿಪ್ರಾಯಪಟ್ಟರು.

    ಶನಿವಾರ ನಾಟೆಕಲ್‌ನಲ್ಲಿರುವ ಕಣಚೂರು ಇನ್‌ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸಸ್‌ನ ಮೂರನೇ ವರ್ಷದ ಘಟಿಕೋತ್ಸವದಲ್ಲಿ ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ ಹಾಗೂ ಆರೋಗ್ಯ ವಿಜ್ಞಾನ ವಿಭಾಗದ ಪದವೀಧರರಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

    ವೈದ್ಯಕೀಯ ವೃತ್ತಿಯಲ್ಲಿ ಎಲ್ಲ ವಿಭಾಗಗಳು ತಂಡವಾಗಿ ಕಾರ್ಯನಿರ್ವಹಿಸಬೇಕಿದ್ದು, ಅದರಲ್ಲೂ ನರ್ಸಿಂಗ್ ವಿಭಾಗದ ಪಾತ್ರ ಮಹತ್ವದ್ದಾಗಿದೆ. ಮಂಗಳೂರಿನಲ್ಲಿ ಎಂಟು ವೈದ್ಯಕೀಯ ಕಾಲೇಜುಗಳಿದ್ದು, ಪ್ರತಿವರ್ಷ ಹಲವು ವೈದ್ಯರನ್ನು ಸಮಾಜಕ್ಕೆ ಅರ್ಪಿಸುತ್ತಿದೆ. ಕಣಚೂರು ಸಂಸ್ಥೆ ಗ್ರಾಮೀಣ ಭಾಗದಲ್ಲಿ ಎಲ್‌ಕೆಜಿಯಿಂದ ಪಿಜಿವರೆಗಿನ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಪದವೀಧರರು ಜೀವನದಲ್ಲಿ ಒಂದು ಹಂತ ತಲುಪಿದ್ದು, ಸಮಾಜ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿದೆ. ಕಲಿಯುವಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಕೇವಲ ಹಣಕ್ಕಾಗಿ ಕೆಲಸ ಮಾಡಬೇಡಿ, ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ ಎಂದರು.

    ಜೀವನದಲ್ಲಿ ಶಿಸ್ತು ಮುಖ್ಯ. ಭಾರತದಲ್ಲಿ ಹೆತ್ತವರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಪದವೀಧರರು ಹೆತ್ತವರು, ಶಿಕ್ಷಕರ ಶ್ರಮ ಮತ್ತು ಕಲಿತ ಸಂಸ್ಥೆಯನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.

    ವಿದೇಶಿ ಮಾದರಿಯಲ್ಲಿ ಗೌರವ

    ವೈದ್ಯಕೀಯ ಕಾಲೇಜು, ವಿಶ್ವವಿದ್ಯಾಲಯಗಳ ಘಟಿಕೋತ್ಸವ ಸಂದರ್ಭ ಪದವೀಧರರನ್ನು ವೇದಿಕೆಯ ಮುಂಭಾಗದಲ್ಲಿ ವಿವಿಪಿಗಳ ಹಿಂಭಾಗದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವುದು ಸಾಮಾನ್ಯ. ಆದರೆ ಕಣಚೂರು ಸಂಸ್ಥೆಯ ಘಟಿಕೋತ್ಸವದಲ್ಲಿ ಪದವೀಧರರಿಗೆ ವೇದಿಕೆಯ ಎರಡೂ ಭಾಗಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿ ವಿದೇಶೀ ಮಾದರಿ ಅನುಸರಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಮೊದಲು ಪ್ರಮಾಣಪತ್ರ ನೀಡಿ ಕೊನೆಗೆ ಅತಿಥಿಗಳ ಭಾಷಣಕ್ಕೆ ಅವಕಾಶ ನೀಡಲಾಯಿತು.

    ಚಿನ್ನದ ಪದಕ

    ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ರ‌್ಯಾಂಕ್ ಪಡೆದ ಡಾ.ಮಧುರಾ ಕೆ.ಐ. ಅವರಿಗೆ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಕೆ.ಮೋನು ದತ್ತಿನಿಧಿ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಈ ಹೆತ್ತವರನ್ನು ವೇದಿಕೆಗೆ ಆಹ್ವಾನಿಸಿ ಅವರ ಸಮ್ಮುಖದಲ್ಲೇ ಚಿನ್ನದ ಪದಕ ನೀಡಲಾಯಿತು. ಇತರ ರ‌್ಯಾಂಕ್ ಹಾಗೂ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

    ಕಣಚೂರು ಇನ್‌ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸಸ್ ಅಧ್ಯಕ್ಷ ಯು.ಕೆ.ಮೋನು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜೀವ್ ಗಾಂಧಿ ಹೆಲ್ತ್ ಸೈನ್ಸ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಯು.ಟಿ.ಇಪ್ತಿಕಾರ್ ರೀದ್, ಸಂಸ್ಥೆಯ ನಿರ್ದೇಶಕಿ ಝೊಹರಾ ಮೋನು, ವೈದ್ಯಕೀಯ ಕಾಲೇಜಿನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ರೋಹನ್ ಮೋನಿಸ್, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಡಾ.ಮಹಮ್ಮದ್ ಇಸ್ಮಾಯಿಲ್, ಡಾ.ವೆಂಕಟ್ ಪ್ರಭು, ಡಾ.ಮೊಹಮ್ಮದ್ ಸುಹೈಲ್ ಮೊದಲಾದವರು ಉಪಸ್ಥಿತರಿದ್ದರು.

    ಕಣಚೂರು ಎಜುಕೇಶನ್ ಟ್ರಸ್ಟ್ ನಿರ್ದೇಶಕ ಡಾ.ಅಬ್ದುಲ್ ರಹ್ಮಾನ್ ಸ್ವಾಗತಿಸಿದರು. ವೈದ್ಯಕೀಯ ಕಾಲೇಜಿನ ಡೀನ್ ಡಾ.ಯು.ಪಿ.ರತ್ನಾಕರ್, ಅಲೈಡ್ ಹೆಲ್ತ್ ಸೈನ್ಸಸ್ ಪ್ರಾಂಶುಪಾಲೆ ಡಾ.ಶಮೀಮಾ, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸುಹೈಲ್, ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಪ್ರೊ.ಮೊಲ್ಲಿ ಸಲ್ದಾನ ಪ್ರತಿಜ್ಞಾವಿಧಿ ಬೋಧಿಸಿದರು.

    ಐದು ವರ್ಷಗಳಿಂದ ಯಾವುದೇ ಒತ್ತಡಕ್ಕೆ ಬಲಿಬೀಳದೆ ಈ ಸ್ಥಾನ ತಲುಪಿರುವ ಪದವೀಧರರು ಈಗ ಜವಾಬ್ದಾರಿಯುತ ವೈದ್ಯರು. ನಿಮ್ಮನ್ನು ಈ ಹಂತಕ್ಕೆ ತರಲು ಹೆತ್ತವರು ಸಾಕಷ್ಟು ಶ್ರಮಪಟ್ಟಿದ್ದಾರೆ. ನೀವು ಎಲ್ಲೇ ಹೋದರೂ ನಿಮ್ಮನ್ನು ಜನ ಜೇನು ನೊಣದಂತೆ ಮುತ್ತಿಗೆ ಹಾಕುತ್ತಾರೆ. ಎಲ್ಲೇ ಹೋದರೂ, ಎಷ್ಟೇ ದೊಡ್ಡ ಸ್ಥಾನ ತಲುಪಿದರೂ ಹೆತ್ತವರನ್ನು ಮರೆಯಬೇಡಿ.

    -ಯು.ಕೆ.ಮೋನು, ಕಣಚೂರು ಇನ್‌ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸಸ್ ಅಧ್ಯಕ್ಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts