More

    6 ಚಿನ್ನದ ಪದಕ, 2 ಕ್ಯಾಶ್​ ಪ್ರೈಜ್​! ಆನ್​ಲೈನ್​ ಕ್ಲಾಸ್​ಗೆ ಮೊಬೈಲ್​ ಕೊಳ್ಳಲು ಕಾಸಿರದ ಬಡ ಯುವತಿಯ ಯಶೋಗಾಥೆ

    ಮಂಗಳೂರು: ಮಹಾಮಾರಿ ಕರೊನಾ ಸಾಂಕ್ರಮಿಕ ಸಮಯದಲ್ಲಿ ಆನ್​ಲೈನ್​ ತರಗತಿಗಳಿಗೆ ಹಾಜರಾಗಲು ಮೊಬೈಲ್​ ಖರೀದಿಸಲು ಸಾಧ್ಯವಾಗದಂತಹ ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿದ ವಿದ್ಯಾರ್ಥಿನಿ, ತನ್ನ ಕೊರತೆಗಳನ್ನು ಮೆಟ್ಟಿನಿಂತು ಇಂದು ಸಾಧಕಿಯಾಗಿ ಹೊರಹೊಮ್ಮಿದ್ದಾಳೆ. ಮೊದಲ ರ್ಯಾಂಕ್​ ಪಡೆದ ಮಾಸ್ಟರ್​ ಆಫ್​ ಸೋಶಿಯಲ್​ ವಿದ್ಯಾರ್ಥಿನಿ ಮಾರ್ಚ್​ 3ರಂದು ನಡೆದ ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವದಲ್ಲಿ 6 ಚಿನ್ನದ ಪದಕಗಳೊಂದಿಗೆ 2 ನಗದು ಬಹುಮಾನದ ಗೌರವಕ್ಕೆ ಭಾಜನರಾಗಿದ್ದಾರೆ.

    ವಿದ್ಯಾರ್ಥಿನಿ ಹೆಸರು ಸ್ಮಿತಾ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎರಡನೇ ಸ್ಥಾನದಲ್ಲಿ ಡಿಗ್ರಿ ಪೂರ್ಣಗೊಳಿಸಿದ ಸ್ಮಿತಾ, ಇದೀಗ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್​ನೊಂದಿಗೆ ಮತ್ತೊಮ್ಮೆ ತಮ್ಮ ಪಾಲಕರು ಮತ್ತು ಕಾಲೇಜಿಗೆ ಹೆಮ್ಮೆಯನ್ನು ತಂದಿದ್ದಾರೆ.

    ಸ್ಮಿತಾ ಅವರು ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಬೆದ್ರೋಡಿಯ ನಿವಾಸಿ. ಇವರದ್ದು ಕಡು ಬಡ ಕುಟುಂಬ. ತಾಯಿ ವಿಮಲಾ ಬೀಡಿ ಸುತ್ತುತ್ತಾರೆ ಮತ್ತು ತಂದೆ ಭರತ್​ ದಿನಗೂಲಿ ನೌಕರರಾಗಿದ್ದಾರೆ. ಸ್ಮಿತಾ ಸಹೋದರ ಕಾರ್ತಿಕ್​ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದಾರೆ. ಉಪ್ಪಿನಂಗಡಿಯಲ್ಲಿರುವ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನಲ್ಲಿ 2021ರಲ್ಲಿ ಡಿಗ್ರಿ ಪೂರ್ಣಗೊಳಿಸಿದರು ಮತ್ತು 2023ರಲ್ಲಿ ಮಾಸ್ಟರ್​ ಆಫ್​ ಸೋಶಿಯಲ್​ ವರ್ಕ್​ ಮುಗಿಸಿದ್ದಾರೆ.

    ತನ್ನ ಸಾಧನೆಯ ಬಗ್ಗೆ ಮಾತನಾಡಿರುವ ಸ್ಮಿತಾ, ತನ್ನ ಯಶಸ್ಸನ್ನು ಪಾಲಕರು, ಸ್ನೇಹಿತರು ಮತ್ತು ಪ್ರಾಧ್ಯಪಕರಿಗೆ ಅರ್ಪಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮೈಸೂರು ವಿಶ್ವವಿದ್ಯಾಲಯದ ಸೋಶಿಯಲ್​ ವರ್ಕ್​ ವಿಭಾಗದ ಪ್ರಾಧ್ಯಾಪಕರಾದ ನಂದೀಶ್​ ವೈ.ಡಿ. ಮತ್ತು ಸಿಬ್ಬಂದಿ ಹಾಗೂ ಉಪ್ಪಿನಂಗಡಿಯ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ನಂದೀಶ್​ ಅವರಿಗೆ ಸಮರ್ಪಿಸಿದ್ದಾರೆ. ಸ್ಕಾಲರ್‌ಶಿಪ್‌ಗಳೊಂದಿಗೆ ನನಗೆ ಸಹಾಯ ಮಾಡಿದರು ಮತ್ತು ನನ್ನ ಅಧ್ಯಯನವನ್ನು ಮುಂದುವರಿಸಲು ಪ್ರೋತ್ಸಾಹಿಸಿದರು, ಇಲ್ಲದಿದ್ದರೆ ನಾನು ಯುಜಿ ಮಟ್ಟದಲ್ಲಿ ಓದುವುದನ್ನು ಮೊಟಕುಗೊಳಿಸುತ್ತಿದ್ದೆ. ಶಿಕ್ಷಣವು ಕೇವಲ ಅಂಕಗಳಿಗಾಗಿ ಅಲ್ಲ, ಜ್ಞಾನಕ್ಕಾಗಿ ಮತ್ತು ಜೀವನದಲ್ಲಿ ಅದೇ ಅನ್ವಯಿಸುತ್ತದೆ ಎಂದು ನನಗೆ ಒತ್ತಿ ಹೇಳಿ, ಹುರಿದುಂಬಿಸಿದರು. ಅವರು ಹೇಳಿದಂತೆ ನಾನು ಮಾಡಿದ್ದೇನೆ ಮತ್ತು ದೊಡ್ಡ ಸಾಧನೆ ಮಾಡಲು ಇದು ನನಗೆ ಸಹಾಯ ಮಾಡಿದೆ ಎಂದು ಸ್ಮಿತಾ ಹಂಚಿಕೊಂಡಿದ್ದಾರೆ. ಪ್ರಸ್ತುತ ಸ್ಮಿತಾ ಅವರು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಲ್ಲಿ ಸಹಾಯಕ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದು, ಕಲಬುರಗಿಯಲ್ಲಿ ಪೋಸ್ಟಿಂಗ್​ ಹಾಕಲಾಗಿದೆ.

    ಸ್ಮಿತಾ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿನಿ, ಅದು ಶೈಕ್ಷಣಿಕ ಅಥವಾ ಪಠ್ಯೇತರ ಚಟುವಟಿಕೆಗಳಾಗಿರಲಿ ಆಕೆ ಎಲ್ಲದರಲ್ಲೂ ಅಗ್ರಸ್ಥಾನದಲ್ಲಿರುತ್ತಿದ್ದಳು. ಕರೊನಾ ಸಾಂಕ್ರಾಮಿಕ ಸಮಯದಲ್ಲಿ ತರಗತಿಗಳನ್ನು ಆನ್‌ಲೈನ್‌ಗೆ ಬದಲಾಯಿಸಲಾಯಿತು. ಬಡ ಕುಟುಂಬದಿಂದ ಸ್ಮಿತಾಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ಖರೀದಿಸಲು ಸಹ ಸಾಧ್ಯವಾಗಲಿಲ್ಲ. ಕಾಲೇಜಿನ ಸಿಬ್ಬಂದಿ ಕಾಳಜಿ ವಹಿಸಿ, ದಾನಿಗಳ ಮೂಲಕ ಆಕೆಗೆ ಮೊಬೈಲ್​ ವ್ಯವಸ್ಥೆ ಮಾಡಲಾಯಿತು. ತನ್ನ ಬಡತನದ ಹೊರತಾಗಿಯೂ ಆಕೆಯ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಪ್ರಾಧ್ಯಾಪಕ ನಂದೀಶ್ ಹೇಳಿಕೊಂಡಿದ್ದಾರೆ. ಬಡತನದಿಂದಾಗಿ ಸ್ಮಿತಾ ಪಾಲಕರು ಆಕೆಯನ್ನು ದಿನಗೂಲಿ ಕೆಲಸಕ್ಕೆ ಕಳುಹಿಸಲು ನಿರ್ಧರಿಸಿದಾಗ ಸ್ವತಃ ನಂದೀಶ್​ ಅವರೇ ಸ್ನಾತಕೋತ್ತರ (ಪಿಜಿ) ಅಧ್ಯಯನವನ್ನು ಮುಂದುವರಿಸಲು ಸ್ಮಿತಾಗೆ ಪ್ರೋತ್ಸಾಹಿಸಿದರು.

    ಸ್ಮಿತಾಳ ಆರ್ಥಿಕ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನಂದೀಶ್, ವಿದೇಶದಲ್ಲಿ ಫೆಲೋಶಿಪ್ ಕಾರ್ಯಕ್ರಮದ ಮೂಲಕ ಸಹಾಯ ಮಾಡಲು ಪ್ರಯತ್ನಿಸಿದರು. ಇದರಿಂದಾಗಿ ಯುಜಿ ಮಟ್ಟದಲ್ಲಿ ಪ್ರತಿ ತಿಂಗಳು 50 ಡಾಲರ್​ ಪ್ರೋತ್ಸಾಹ ಹಣ ಸಿಕ್ಕಿತು. ಸ್ನಾತಕೋತ್ತರ ಪದವಿ ಸಮಯದಲ್ಲಿ 50 ರಿಂದ 100 ಡಾಲರ್​ಗೆ ಹೆಚ್ಚಿಸಲಾಯಿತು. ಸ್ಮಿತಾಳ ಸಾಧನೆಗಳ ಆಧಾರದ ಮೇಲೆ ಆರ್ಥಿಕ ಸಹಾಯವನ್ನು ನೀಡಲಾಯಿತು ಎಂದು ನಂದೀಶ್​ ಹೇಳಿದ್ದಾರೆ.

    ನನ್ನ ಮಗಳು ತುಂಬಾ ಓದುತ್ತಾಳೆ. ಹಗಲು-ರಾತ್ರಿಯೆನ್ನದೇ ಸದಾ ಪುಸ್ತಕ ಹಿಡಿದಿರುತ್ತಳೆ. ದಯವಿಟ್ಟು ಅವಳಿಗೆ ವಿರಾಮ ತೆಗೆದುಕೊಳ್ಳಲು ಹೇಳಬಹುದೇ ಎಂದು ಸ್ಮಿತಾ ತಾಯಿ ವಿಮಲಾ ಅವರು ನಂದೀಶ್‌ ಅವರ ಬಳಿ ಒಮ್ಮೆ ಕೇಳಿದ್ದರಂತೆ. ಅಷ್ಟರಮಟ್ಟಿಗೆ ಸ್ಮಿತಾ ಓದಿನ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. (ಏಜೆನ್ಸೀಸ್​)

    50 ಸೆಕೆಂಡ್​ ಜಾಹೀರಾತಿಗೆ 5 ಕೋಟಿ ರೂಪಾಯಿ! ಬಾಲಿವುಡ್​ ನಟಿಯರನ್ನೂ ಮೀರಿಸಿದ ಮಲಯಾಳಂ ಬ್ಯೂಟಿ

    ರಾಜಮನೆತನಕ್ಕೆ ಮತ ಹಾಕಿದರೆ ಚಾಮುಂಡೇಶ್ವರಿಗೆ ಹೂವು ಹಾಕಿದಂತೆ: ಜಿ.ಟಿ. ದೇವೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts