ಕಲ್ಕತ್ತಾ ವಿರುದ್ಧ ಅಬ್ಬರಿಸಿದ ಪಂಜಾಬ್​ ಬ್ಯಾಟ್ಸ್​ಮನ್​ಗಳು; ಶಾರುಖ್​ ಪುತ್ರನ ರಿಯಾಕ್ಷನ್​ ವೈರಲ್

Abram
Published on

ಕಲ್ಕತ್ತಾ: ಏಪ್ರಿಲ್​ 26ರಂದು ಇಲ್ಲಿನ ಈಡನ್​ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ 42ನೇ ಐಪಿಎಲ್​ ಪಂದ್ಯದಲ್ಲಿ ಜಾನಿ ಬೇರ್​ಸ್ಟೋ ಶತಕದ ಬಲದಿಂದ ಪಂಜಾಬ್​ ಕಿಂಗ್ಸ್ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದು, ಶ್ರೇಯಸ್​ ಅಯ್ಯರ್​ ಪಡೆಗೆ ತವರಿನಲ್ಲಿ ಮುಖಭಂಗವಾಗಿದೆ. ಇನ್ನು ಪಂದ್ಯದ ವೇಳೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದು, ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಕಲ್ಕತ್ತಾ ನೈಟ್​ರೈಡರ್ಸ್​ಗೆ ಆರಂಭಿಕರಾದ ಸುನಿಲ್​ ನರೈನ್​ (71 ರನ್) ಹಾಗೂ ಫಿಲ್​ ಸಾಲ್ಟ್​ (75 ರನ್) ಬೃಹತ್​ ಮೊತ್ತ ಪೇರಿಸಲು ಭದ್ರ ಬುನಾದಿಯನ್ನು ಹಾಕಿಕೊಟ್ಟು ಔಟಾದರು. ಬಳಿಕ ಬ್ಯಾಟಿಂಗ್​ ಮಾಡಲು ಬಂದ ಶ್ರೇಯಸ್​ ಅಯ್ಯರ್​ 10 ಎಸೆತಗಳಲ್ಲಿ 3 ಸಿಕ್ಸರ್​. 1 ಬೌಂಡರಿ ಒಳಗೊಂಡಂತೆ 28 ರನ್​ ಸಿಡಿಸಿ ಅರ್ಷ್​ದೀಪ್​ ಸಿಂಗ್​ಗೆ ವಿಕೆಟ್​ ಒಪ್ಪಿಸಿದರು.

ಕೆಕೆಆರ್​ ನಾಯಕ ಶ್ರೇಯಸ್​ ಅಯ್ಯರ್​ ಔಟಾದ ವೇಳೆ ತಂಡದ ಸಹ ಮಾಲೀಕ ಶಾರುಖ್​ ಖಾನ್​ ಅವರ ಪುತ್ರ ಅಬ್ರಾಮ್​ ನೀಡಿದ ರಿಯಾಕ್ಷನ್​ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಇದಲ್ಲದೆ ಪಂಜಾಬ್​ ಬ್ಯಾಟ್ಸ್​ಮನ್​ಗಳು ಕಲ್ಕತ್ತಾ ಬೌಲರ್​ಗಳನ್ನು ಬೆಂಡೆತ್ತುವಾಗ ಅಬ್ರಾಮ್​ ನೀಡಿರುವ ರಿಯಾಕ್ಷನ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಶಾರುಖ್​ಗಿಂತ ಈತನ ರಿಯಾಕ್ಷನ್​​ ನೋಡುವುದೆ ಒಂದು ಖುಷಿ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

17ನೇ ಆವೃತ್ತಿಯ 42ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 261 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್​ 18.4 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net