ಇನ್ಮುಂದೆ 'ಒನ್ ಮೋರ್​..ಒನ್​ ಮೋರ್'​ ಬೆಳ್ಳುಳ್ಳಿ ಕಬಾಬ್ ಅನ್ನೋದು ಕಷ್ಟ! ಕಾರಣ ಹೀಗಿದೆ

Untitled design - 2024-02-20T083815.518
Published on

ಬೆಂಗಳೂರು: ಕಳೆದ ಕೆಲವು ವಾರಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಬೆಳ್ಳಳ್ಳಿ ಕಬಾಬ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ರೆಸಿಪಿ ತಿಂದರೆ ಒನ್ ಮೋರ್, ಒನ್ ಮೋರ್ ಅಂತ ಹೇಳಬೇಕು, ಚಟಪಟ, ಚಟಪಟ ಎಂಬ ಡೈಲಾಗ್​ಗಳು ಎಲ್ಲೆಡೆಯಿಂದ ಕೇಳಿಬರುತ್ತಿವೆ. ಸದ್ಯ ಇದೊಂದು ಟ್ರೆಂಡ್ ಆದಂತೆ ಬೆಳ್ಳುಳ್ಳಿ ಕಬಾಬ್​ಗೆ ಕೂಡ ಬೇಡಿಕೆ ಹೆಚ್ಚಿದ್ದು, ಅದರ ಜತೆಗೆ ಬೆಳ್ಳುಳ್ಳಿ ದರ ಕೂಡ ದುಬಾರಿಯಾಗಿದೆ. ಇದೀಗ ಈ ಬೆಲೆ ಬಿಸಿ ಸದ್ಯ ಜನಸಾಮಾನ್ಯರ ಮೇಲೆ ಕೊಂಚ ಒತ್ತಡ ಹೇರಿದಂತೆ ಕಾಣುತ್ತಿದೆ.

ದರ ಏರಿಕೆಯ ಬೆನ್ನಲ್ಲೇ ಬೆಳ್ಳುಳ್ಳಿ ಕಬಾಬ್ ದುಬಾರಿಯಾಗಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಸಾಮಾನ್ಯವಾಗಿ ನಾವೆಲ್ಲಾ ನೋಡಿರುವಂತೆ ಏಕಾಏಕಿ ಟೊಮೊಟೊ, ಈರುಳ್ಳಿ ಬೆಲೆಗಳಲ್ಲಿ ಮಾತ್ರ ದಿಢೀರ್ ಏರಿಕೆ ಕಾಣುತ್ತಿತ್ತು. ಈ ದರ ಏರಿಕೆ ಬಿಸಿಯಿಂದ ಜನರು ತತ್ತರಿಸುತ್ತಿದ್ದರು. ಆದರೆ, ಕೆಲವು ದಿನಗಳ ನಂತರ ದರದಲ್ಲಿ ಇಳಿಕೆ ಕಂಡುಬರುತ್ತಿದ್ದನ್ನು ಗಮನಿಸಿದ್ದೇವೆ. ಇದೀಗ ಈ ಗಾಳಿ ಬೆಳ್ಳುಳ್ಳಿಗೂ ಬೀಸಿದೆ!

ಅಡುಗೆ ಮನೆಯಲ್ಲಿ ಅದರಲ್ಲೂ ಹೆಚ್ಚಾಗಿ ಮಾಂಸದ ಅಡಿಗೆಗೆ ರುಚಿ ತರುವ ಬೆಳ್ಳುಳ್ಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಸದ್ಯ ಬೆಳ್ಳುಳ್ಳಿಗೆ ಬಂಪರ್ ಬೆಲೆ ಬಂದಿದ್ದು, ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಬೆಳೆ ಉತ್ಪಾದನೆ ಕುಂಠಿತಗೊಂಡು, ಮಾರುಕಟ್ಟೆಗಳಲ್ಲಿ ಪೂರೈಕೆಯಲ್ಲಿ ಭಾರಿ ಕಡಿತ ಉಂಟಾಗಿದೆ. ಈ ಕಾರಣಗಳಿಂದ ದಿಢೀರ್​ ಬೆಳ್ಳುಳ್ಳಿ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿದೆ.

ಮಳೆಯ ಕೊರತೆಯಿಂದ ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಹಾಗೂ ಹೈಬ್ರಿಡ್ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ರಾಜ್ಯದಲ್ಲಿ ಕಳೆದ ಡಿಸೆಂಬರ್‌ನ ಮೂರನೇ ವಾರದಲ್ಲಿ ಬೆಳ್ಳುಳ್ಳಿ ದರವು ಏರಿಕೆಯ ಹಾದಿ ಹಿಡಿದಿತ್ತು. ಅಂದಿನಿಂದ ಇಲ್ಲಿಯವರೆಗೂ ಬೆಲೆ ಇಳಿಕೆ ಕಂಡಿಲ್ಲ. ಕಳೆದ ನಾಲ್ಕು ದಿನಗಳಿಂದ ಸಗಟು ಬೆಳ್ಳುಳ್ಳಿ ದರವು ಕೆ.ಜಿಗೆ 20-30 ರೂ. ಇಳಿಕೆಯಾಗಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಧಾರಣೆ ಮಾತ್ರ ಇಳಿಕೆಯಾಗಿಲ್ಲ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹೈಬ್ರಿಡ್ ಬೆಳ್ಳುಳ್ಳಿ ಒಂದು ಕೆ.ಜಿಗೆ 60-80 ರೂ. ಹಾಗೂ ಜವಾರಿ ಬೆಳ್ಳುಳ್ಳಿ 90ರಿಂದ 120 ರೂ. ಇತ್ತು. ಪ್ರಸ್ತುತ ಹೈಬ್ರಿಡ್ 400-430 ರೂ. ಮತ್ತು ಜವಾರಿ 440-480 ರೂ.ಗೆ ಮಾರಾಟವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net