

ಬೆಂಗಳೂರು: ರಾಜ್ಯದ ಹಿರಿಯ ಸಂಸದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಅಪರಿಚಿತ ಮಹಿಳೆಯಿಂದ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಬೆದರಿಕೆ ಬಂದಿದ್ದು, ಈ ಕುರಿತು ಅವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ವಿವರ: ದಾವಣಗೆರೆಯ ಹಿರಿಯ ಸಂಸದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಜುಲೈ 20 ರಂದು ರಾತ್ರಿ 10.16ಕ್ಕೆ ಅಪರಿಚಿತ ಮಹಿಳೆಯೊಬ್ಬಳು "ಹಾಯ್........" ಎಂದು ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಸಿದ್ದೇಶ್ವರ್ ಅವರಿಗೆ 10:22ಕ್ಕೆ ದಿಢೀರ್ ವಿಡಿಯೋ ಕಾಲ್ ಬಂದಿದೆ. ಯಾರು, ಏನು ಎಂದು ಪ್ರಶ್ನೆ ಮಾಡಿದಾಗ ಆಕೆ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾರೆ.
ಕಾಲ್ ಕಟ್ ಮಾಡಿದರೂ ಮತ್ತೆ ರಾತ್ರಿ 10.24ಕ್ಕೆ ವಾಟ್ಸ್ ಆಪ್ ಆಡಿಯೋ ಕಾಲ್ ಮಾಡಿ ಮತ್ತದೇ ಮಾತನ್ನು ಮುಂದುವರಿಸಿದ್ದಾರೆ. ಕರೆಯನ್ನು ಕಟ್ ಮಾಡಿದ್ರು ಪುನಃ ಕಾಲ್ ಮಾಡುತ್ತಿದ್ದ ಅಪರಿಚಿತ ಮಹಿಳೆ, ಮತ್ತೆ 10.27ಕ್ಕೆ ವಿಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾರೆ ಎಂದು ಸಂಸದ ಆರೋಪಿಸಿದ್ದಾರೆ.
ವಿಡಿಯೋ ಕಾಲ್ ಅನ್ನು ರೆಕಾರ್ಡ್ ಮಾಡಿ ಅಪ್ಲೋಡ್ ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾರೆ. ಈ ಘಟನೆ ಸಂಬಂಧ ಜಿ.ಎಂ. ಸಿದ್ದೇಶ್ವರ್, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಇದೀಗ ಎಫ್ಐಆರ್ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.