

ಶ್ರೀನಗರ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಐದನೇ ಹಂತದ ಮತದಾನಕ್ಕೆ ಚುನಾವಣಾ ಆಯೋಗ ತಯಾರಿ ನಡೆಸಿದೆ. ಮತದಾನಕ್ಕೆ ಎರಡು ದಿನಗಳು ಬಾಕಿ ಇರುವ ಸಮಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಜಮ್ಮು-ಕಾಶ್ಮೀರದ ಶೋಫಿಯಾನ್ ಹಾಗೂ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಶೋಫಿಯಾನ್ ಜಿಲ್ಲೆಯ ಹುರ್ಪುರ ಗ್ರಾಮದ ಮಾಜಿ ಸರ್ಪಂಚ್, ಬಿಜೆಪಿ ಮುಖಂಡ ಐಜಾಜ್ ಅಹ್ಮದ್ ಶೇಖ್ರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದು, ಘಟನೆ ನಡೆದ ಪ್ರದೇಶದ ಸುತ್ತ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಈ ಮೊದಲು ತೀವ್ರವಾದಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಐಜಾಜ್ ಕಾಲಕ್ರಮೇಣ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿ ಪರಿವರ್ತನೆಗೊಂಡಿದ್ದರು. ಐಜಾಜ್ ಅವರ ಹತ್ಯೆಯನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಅನಂತ್ನಾಗ್ ಜಿಲ್ಲೆಯ ಯನ್ನಾರ್ ಪ್ರದೇಶದಲ್ಲಿ ಉಗ್ರರು ಜೈಪುರ ಮೂಲದ ದಂಪತಿ ಫರ್ಹಾ ಮತ್ತು ತರ್ಬೇಜ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರ ದುಷ್ಕೃತ್ಯ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಬಿಜೆಪಿ ಘಟನೆಯನ್ನು ಖಂಡಿಸಿವೆ ಮತ್ತು ಕಠಿಣ ಕ್ರಮಕ್ಕೆ ಆಗ್ರಹಿಸಿವೆ.