ಈ ಚುನಾವಣೆಯಲ್ಲಿ ನಾನು ಆಪ್​ಗೆ ಮತ ಹಾಕಿದರೆ, ಕೇಜ್ರಿವಾಲ್​ ಕಾಂಗ್ರೆಸ್​ಗೆ ವೋಟ್​ ಮಾಡುತ್ತಾರೆ: ರಾಹುಲ್​ ಗಾಂಧಿ

Rahul Gandhi
Published on

ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೇಗಾದರೂ ಮಾಡಿ ಬಿಜೆಪಿಯನ್ನು ಮಣಿಸಿ ಅಧಿಕಾರಕ್ಕೇರಬೇಕೆಂಬ ಹಂಬಲದಲ್ಲಿ ಇಂಡಿಯಾ ಮೈತ್ರಿಕೂಟ ದೇಶಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದೆ. ಇನ್ನೂ ಚುನಾವಣೆ ಪ್ರಚಾರದ ವೇಳೆ ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಭಾಷಣ ಮಾಡುವುದು ಸರ್ವೇ ಸಾಮಾನ್ಯ ಅದೇ ರೀತಿ ಈಗ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಆಡಿರುವ ಮಾತುಗಳು ಎಲ್ಲರ ಗಮನ ಸೆಳೆಯುತ್ತಿದೆ.

ನವದೆಹಲಿಯ ಅಶೋಕ್​ ವಿಹಾರ್​ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​, ಕಾಂಗ್ರೆಸ್​ ಹಾಗೂ ಆಮ್​ ಆದ್ಮಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕರೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ಒಲವುಳ್ಳ ಉದ್ಯಮಿಗಳೊಂದಿಗಿನ ಲಿಂಕ್​ ಮತ್ತು ಅವರು ಚುನಾವಣಾ ಬಾಂಡ್‌ಗಳನ್ನು ಹೇಗೆ ದುರುಪಯೋಗಪಡಿಸಿಕೊಂಡರು ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ನನ್ನ ಜೊತೆ ಚರ್ಚೆಗೆ ಬರಲು ನಿರಾಕರಿಸುತ್ತಿದ್ದಾರೆ. ನಾನು ಈಗಲೂ ಚರ್ಚೆಗೆ ಸಿದ್ದನಾಗಿದ್ದೇನೆ ಈ ಚುನಾವಣೆಯಲ್ಲಿ ನಾನು ಎಎಪಿಗೆ ಮತ ಹಾಕುತ್ತೇನೆ ಮತ್ತು ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಪ್ರಿಯವಾಗಿರುವ ಟಿವಿ ಚಾನೆಲ್​ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಆದರೆ, ಅವರು ನನ್ನೊಂದಿಗೆ ಚರ್ಚೆ ನಡೆಸಲು ಮಾತ್ರ ಸಿದ್ದವಾಗಿಲ್ಲ. ಏಕೆಂದರೆ ಅವರಿಗೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಭಯವಾಗಿರುವ ಕಾರಣ ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಅದಾನಿ-ಅಂಬಾನಿಯಿಂದ ಟೆಂಪೋ-ಲೋಡ್ ಹಣವನ್ನು ಪಡೆಯುವ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಾರೆ, ಆದರೆ ಅವರು ಅದನ್ನು ತನಿಖೆ ಮಾಡಿಸಲು ಮಾತ್ರ ಮುಂದಾಗುತ್ತಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net