More

    ಐಪಿಎಲ್​ನಲ್ಲಿ ಮತ್ತೊಂದು ವಿವಾದಾತ್ಮಕ ತೀರ್ಪು; ನಾಟೌಟ್​ ಇದ್ದರೂ ಔಟ್​ ಎಂದ ಅಂಪೈರ್​

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್​ಕಿಂಗ್ಸ್​ ನಡುವಿನ ನಾಕೌಟ್​ ಪಂದ್ಯದಲ್ಲಿ ಫಾಫ್​ ಡು ಪ್ಲೆಸಿಸ್​ ಪಡೆಯೂ 27 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಪ್ಲೇಆಫ್​ ಪ್ರವೇಶಿಸಿದೆ. ಉಭಯ ತಂಡಗಳ ನಡುವಿನ ಹೈವೋಲ್ಟೇಜ್​ ಪಂದ್ಯದಲ್ಲಿ ಮತ್ತೊಮ್ಮೆ ಕಳಪೆ ಅಂಪೈರಿಂಗ್​ ಕಂಡು ಬಂದಿದ್ದು, ಈ ಬಗ್ಗೆ ಕ್ರೀಡಾಭಿಮಾನಿಗಳು ಕಿಡಿಕಾರುತ್ತಿದ್ದಾರೆ.

    ಅಂಪೈರ್​ನ ವಿವಾದಾತ್ಮಕ ತೀರ್ಪಿನ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಈ ವಿಚಾರವನ್ನು ಮುಂದಿಟ್ಟುಕೊಂಡು ಟ್ರೋಲ್​ ಮಾಡಲಾಗುತ್ತಿದೆ.

    ಆರ್​ಸಿಬಿ ಬ್ಯಾಟಿಂಗ್​ ವೇಳೆ ಮಿಚೆಲ್​ ಸ್ಯಾಂಟ್ನರ್​ ಎಸೆದ 13ನೇ ಓವರ್​ನಲ್ಲಿ ರಜತ್​ ಪಾಟೀದಾರ್​ ಬಾರಿಸಿದ ಚೆಂಡು ಬೌಲರ್​ ಕೈತಾಗಿ ನಾನ್​ಸ್ಟ್ರೈಕ್​ ಎಂಡ್​ನಲ್ಲಿದ್ದ ಸ್ಟಂಪ್ಸ್​ ತಾಗುತ್ತದೆ. ಈ ವೇಳೆ ಕ್ರೀಸ್​ ಬಿಟ್ಟು ಒಂದು ಹೆಜ್ಜೆ ಮುಂದಿದ್ದ ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಕೂಡಲೇ ಹಿಂತಿರುಗಿ ತಮ್ಮ ಬ್ಯಾಟನ್ನು ಕ್ರೀಸ್​ನೊಳಗೆ ಇರಿಸುತ್ತಾರೆ. ಇದನ್ನು ಪರಿಶೀಲಿಸುವಂತೆ ಆನ್​ಫೀಲ್ಡ್​ ಅಂಪೈರ್​ ಥರ್ಡ್​ ಅಂಪೈರ್​ಗೆ ಮನವಿ ಮಾಡುತ್ತಾರೆ. ಇದನ್ನು ಪರಿಶೀಲಿಸಿದ ಥರ್ಡ್​ ಅಂಪೈರ್ ಮೈಕೆಲ್​ ಗೋಫ್​ ಔಟ್​ ಎಂದು ತೀರ್ಪು ನೀಡುತ್ತಾರೆ. ಮೂರನೇ ಅಂಪೈರ್​ನ ಈ ತೀರ್ಪಿಗೆ ಆರ್​ಸಿಬಿ ನಾಯಕ ಫಾಫ್​ ಸೇರಿದಂತೆ ಸಹ ಆಟಗಾರರು ಅಸಮಾಧಾನ ಹೊರಹಾಕುತ್ತಾರೆ.

    ವೈರಲ್ ಆಗಿರುವ ಫೋಟೋ ವಿಡಿಯೋ ನೋಡುವುದಾದರೆ ಫಾಫ್​ ಡು ಪ್ಲೆಸಿಸ್​ ಬ್ಯಾಟ್​ ಕ್ರೀಸ್​ನೊಳಗಿದ್ದು, ಅಂಪೈರ್​ ಅದ್ಯಾವ ಮಾನದಂಡದ ಮೇಲೆ ಔಟೆಂದು ತೀರ್ಪು ನೀಡಿದರು ಎಂಬುದು ಈವರೆಗೆ ತಿಳಿದು ಬಂದಿಲ್ಲ. ಇತ್ತ ಐಪಿಎಲ್​ನಲ್ಲಿ ಕಳಪೆ ಅಂಪೈರಿಂಗ್​ ಪ್ರಕರಣ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ಈ ವಿಚಾರವನ್ನು ಆರ್​ಸಿಬಿ ಹಾಗೂ ಸಿಎಸ್​ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗಂಭೀರ​ ಕ್ರಮ ಕೈಗೊಳ್ಳುವಂತೆ ಕ್ರೀಡಾಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

    ಮೇ 18ರಂದು ನಡೆದ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ನಾಕೌಟ್​ ಪಂದ್ಯದಲ್ಲಿ ಫಾಫ್​ ಡು ಪ್ಲೆಸಿಸ್​ ಪಡೆಯು 27 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇಆಫ್​ ಪ್ರವೇಶಿಸಿದ್ದು, ಮೇ 18 ಆರ್​ಸಿಬಿ ಪಾಲಿಗೆ ಲಕ್ಕಿ ಡೇ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮೇ 22ರಂದು ಆರ್​ಸಿಬಿ ಅಹಮದಾಬಾದಿನಲ್ಲಿ ಎಲಿಮಿನೇಟರ್​ ಪಂದ್ಯವನ್ನು ಆಡಲಿದ್ದು, ಎದುರಾಳಿ ತಂಡ ಮೇ 19ರಂದು ನಡೆಯುವ ಡಬಲ್​ ಹೆಡರ್​ ಪಂದ್ಯದ ಬಳಿಕ ನಿರ್ಧಾರವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts