

ಪಾಲ್ಘರ್ : ಬ್ಯಾಂಕ್ ಲೂಟಿ ಮಾಡಲು ಬಂದ ದುಷ್ಕರ್ಮಿಗಳು ವಿರೋಧ ವ್ಯಕ್ತಪಡಿಸಿದ ಇಬ್ಬರು ಮಹಿಳಾ ಉದ್ಯೋಗಿಗಳನ್ನು ಚೂರಿಯಿಂದ ಇರಿದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಒಬ್ಬ ಮಹಿಳೆಯು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿದವರಲ್ಲಿ ಒಬ್ಬ ಸಾಲ ಮಾಡಿಕೊಂಡಿದ್ದ ಅದೇ ಬ್ಯಾಂಕಿನ ಮಾಜಿ ಮ್ಯಾನೇಜರ್ ಆಗಿದ್ದ ಎನ್ನಲಾಗಿದೆ.
ವಿರಾರ್ನ ಐಸಿಐಸಿಐ ಬ್ಯಾಂಕ್ ಶಾಖೆಯಲ್ಲಿ ಗುರುವಾರ ರಾತ್ರಿ 8.30 ಕ್ಕೆ ಈ ಘಟನೆ ನಡೆದಿದ್ದು, ಆ ಸಮಯದಲ್ಲಿ ಇಬ್ಬರೇ ಮಹಿಳಾ ಉದ್ಯೋಗಿಗಳು ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರು ದುಷ್ಕರ್ಮಿಗಳು ಬ್ಯಾಂಕಿಗೆ ನುಗ್ಗಿ, ಅಸಿಸ್ಟೆಂಟ್ ಮ್ಯಾನೇಜರ್ ಯೋಗಿತ ವರ್ತಕ್ ಮತ್ತು ಕ್ಯಾಶಿಯರ್ ಶ್ರದ್ಧಾ ದೇವ್ರುಖರ್ ಅವರಿಗೆ ಚಾಕು ತೋರಿಸಿದರು. ಹಣ ಮತ್ತು ಒಡವೆಗಳನ್ನು ಲೂಟಿ ಮಾಡಿ ಓಡಿಹೋಗುತ್ತಿದ್ದಾಗ, ಆ ಮಹಿಳೆಯರು ಹುಲ್ಲೆಬ್ಬಿಸಿದ್ದರಿಂದ ಅವರಿಗೆ ಚಾಕುವಿನಿಂದ ಇರಿದು ಓಡಿಹೋದರು ಎಂದು ಸೀನಿಯರ್ ಇನ್ಸ್ಪೆಕ್ಟರ್ ಸುರೇಶ್ ವರದೆ ಹೇಳಿದ್ದಾರೆ.
ಇದನ್ನೂ ಓದಿ: ಟ್ವಿಟರ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಂ.1
ಓಡಿಹೋಗುತ್ತಿದ್ದವರನ್ನು ಅಟ್ಟಿಸಿಕೊಂಡು ಹೋದ ಅಕ್ಕಪಕ್ಕದ ಜನರು ಆರೋಪಿ ಅನಿಲ್ ದುಬೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರೆ, ಮತ್ತೊಬ್ಬ ಪರಾರಿಯಾದ. ಇತ್ತ ಬ್ಯಾಂಕಿನಲ್ಲಿ ಯೋಗಿತ ವರ್ತಕ್ ರಕ್ತದ ಮಡುವಿನಲ್ಲಿ ಅಲ್ಲಾಡದೆ ಬಿದ್ದಿದ್ದರು, ಇನ್ನೊಬ್ಬರಿಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ಹೋದಾಗ ಯೋಗಿತ ಅದಾಗಲೇ ಸತ್ತುಹೋಗಿದ್ದಾರೆಂದು ವೈದ್ಯರು ಘೋಷಿಸಿದರೆ, ಶ್ರದ್ಧಾ ದೇವ್ರುಖರ್ಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
"ಆರೋಪಿ ಅನಿಲ್ ದುಬೆ ಇದೇ ಬ್ಯಾಂಕ್ ಬ್ರ್ಯಾಂಚಿನ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದವನು. ಹಾಲಿ ಜಿಲ್ಲೆಯ ಮತ್ತೊಂದೆಡೆ ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. 1 ಕೋಟಿ ರೂಪಾಯಿ ಸಾಲ ಪಡೆದಿದ್ದ ಆತ, ಅದನ್ನು ಮರುಪಾವತಿಸುವುದಕ್ಕಾಗಿ ಬ್ಯಾಂಕ್ ಲೂಟಿ ಮಾಡುವ ಸಂಚು ನಡೆಸಿದ್ದ" ಎಂದು ಸುರೇಶ್ ವರದೆ ತಿಳಿಸಿದ್ದಾರೆ. ಕೊಲೆ, ಡಕಾಯಿತಿ, ಕೊಲೆ ಯತ್ನದ ಪ್ರಕರಣಗಳನ್ನು ದಾಖಲಿಸಲಾಗಿದ್ದು, ವಿರಾರ್ ಪೊಲೀಸರು ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. (ಏಜೆನ್ಸೀಸ್)