VIDEO | ಕೊಲೆ ಶಂಕೆ ಮೂಡಿಸಿರುವ ನ್ಯಾಯಾಧೀಶರ 'ಅಪಘಾತ'ದ ದೃಶ್ಯ!

judge
Published on

ಧನಬಾದ್​ : ಬೆಳಗಿನ ಜಾಗಿಂಗ್ ಹೋಗಿದ್ದ ಜಿಲ್ಲಾ ನ್ಯಾಯಾಧೀಶರೊಬ್ಬರು 'ಅಪಘಾತ'ಕ್ಕೀಡಾಗಿ ಮೃತಪಟ್ಟಿದ್ದ ಪ್ರಕರಣದಲ್ಲಿ ಇದೀಗ ಕೊಲೆಯ ಶಂಕೆ ಎದ್ದಿದೆ. ತಮ್ಮ ಪಾಡಿಗೆ ರಸ್ತೆಬದಿಯಲ್ಲಿ ಹೋಗುತ್ತಿದ್ದ ಝಾರ್ಕಂಡಿನ ನ್ಯಾಯಾಧೀಶ ಉತ್ತಮ್​ ಆನಂದ್​ ಅವರಿಗೆ ವಾಹನವೊಂದು ಉದ್ದೇಶಪೂರ್ವಕವಾಗಿ ಗುದ್ದಿದಂತೆ ಕಾಣುವ ಸಿಸಿಟಿವಿ ಫೂಟೇಜ್​ ಜಾಲತಾಣದಲ್ಲಿ ವೈರಲ್ ಆಗಿದೆ.

ಬುಧವಾರ ಬೆಳಿಗ್ಗೆ ಜಾಗಿಂಗ್​ಗಾಗಿ ತೆರಳಿದ್ದ ನ್ಯಾಯಾಧೀಶರಾದ ಆನಂದ್​ ಆಸ್ಪತ್ರೆಯಲ್ಲಿ ಹಿಟ್​ ಅಂಡ್​ ರನ್​ ಕೇಸ್​ ಅಡಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಅವರ ಸಾವಿಗೆ ಕಾರಣವಾದ 'ಅಪಘಾತ'ದ ದೃಶ್ಯವನ್ನು ತೋರಿಸುವ ಸಿಸಿಟಿವಿ ಫೂಟೇಜ್​ ಹೊರಬಿದ್ದಿದೆ. ಅದರಲ್ಲಿ ಬೆಳಿಗ್ಗೆ 5 ಗಂಟೆಗೆ ವಾಹನ ಸಂಚಾರ ಕಡಿಮೆ ಇರುವ ರಸ್ತೆಯಲ್ಲಿ ಆನಂದ್​ ಅವರು ಜಾಗ್​ ಮಾಡುತ್ತಿರುವಾಗ, ಟೆಂಪೋ ಒಂದು ಟರ್ನ್​ ತೆಗೆದುಕೊಂಡು ಅವರೆಡೆಗೇ ಹೋಗಿ ಗುದ್ದುವುದು. ಅವರು ಕೆಳಗೆ ನಿತ್ರಾಣರಾಗಿ ಬಿದ್ದಂತೆ, ಆ ವಾಹನ ಮುಂದೆ ಹಾದುಹೋಗುವುದು ಕಂಡುಬರುತ್ತದೆ. ಇದರಿಂದಾಗಿ ನ್ಯಾಯಾಧೀಶ ಆನಂದ್​ ಅವರ ಸಾವು ನಿಜವಾಗಿ ಅಪಘಾತವೋ ಅಥವಾ ಕೊಲೆಯೋ ಎಂಬ ಶಂಕೆ ಮೂಡಿದೆ.

ಸುಪ್ರೀಂ ಕೋರ್ಟ್​ ಬಾರ್​ ಅಸೋಸಿಯೇಷನ್​ ಪರವಾಗಿ ಹಿರಿಯ ವಕೀಲ ವಿಕಾಸ್​ ಸಿಂಗ್​ ಅವರು ಇಂದು ಈ ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ಅವರೆದುರು ಪ್ರಸ್ತಾಪ ಮಾಡಿದರು. "ಇದು ನ್ಯಾಯಾಂಗದ ಮೇಲೆ ಮಾಡಿರುದ ದಾಳಿಯಂತಿದ್ದು, ಈ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಬೇಕು. ಸುಪ್ರೀಂ ಕೋರ್ಟ್​ ಈ ಬಗ್ಗೆ ಸುಯೋ ಮೋಟೋ ವಿಚಾರಣೆ ಕೈಗೊಂಡು ಸೂಕ್ತ ಆದೇಶ ನೀಡಬೇಕು" ಎಂದರು. ಮತ್ತೆ ಕೆಲವು ವಕೀಲರು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರ ಮುಂದೆ ಈ ವಿಚಾರ ಪ್ರಸ್ತಾಪ ಮಾಡಿದಾಗ, ಮುಖ್ಯ ನ್ಯಾಯಮೂರ್ತಿ ರಮಣ ಅವರು ಝಾರ್ಕಂಡ್​ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೊಂದಿಗೆ ತಾವು ಮಾತನಾಡಿರುವುದಾಗಿ ಹೇಳಿದರು. ಹೈಕೋರ್ಟ್​ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದರು ಎಂದು ಎನ್​ಡಿಟಿವಿ ವರದಿ ಮಾಡಿದೆ.

ಧನಬಾದ್​ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾಗಿದ್ದ ಮೃತ ಉತ್ತಮ್​ ಆನಂದ್​ ಅವರು ನಿರ್ವಹಿಸುತ್ತಿದ್ದ ಕೇಸುಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಧನಬಾದ್ ಪಟ್ಟಣದಲ್ಲಿ ನಡೆದ ಮಾಫಿಯಾ ಹತ್ಯೆಗಳ ಹಲವು ಮೊಕದ್ದಮೆಗಳನ್ನು ಅವರು ವಿಚಾರಣೆ ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರು ಗ್ಯಾಂಗ್​ಸ್ಟರ್​ಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ. ವಾಹನದ ಚಾಲಕ ಮತ್ತು ಕೆಲವು ಸಹಚರರನ್ನು ಧನಬಾದಿನ ಗಿರಿದಿಹ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net