

ಟೋಕಿಯೋ : ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ಬಾಕ್ಸರ್ ಸತೀಶ್ ಕುಮಾರ್ ಮತ್ತು ಪುರುಷರ ಹಾಕಿ ತಂಡ ಉತ್ತಮ ಪ್ರದರ್ಶನ ತೋರಿ, ತಂತಮ್ಮ ವಿಭಾಗಗಳಲ್ಲಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ. ಜೊತೆಗೆ, ಆರ್ಚರಿಯಲ್ಲಿ 1/16 ಎಲಿಮಿನೇಷನ್ಸ್ ರೌಂಡ್ನಲ್ಲಿ ಭಾರತದ ಅತನು ದಾಸ್ ಅವರು ದಕ್ಷಿಣ ಕೊರಿಯಾದ 3ನೇ ರಾಂಕ್ ಉಳ್ಳ ಓಹ್ ಜಿನ್ ಹ್ಯೆಕ್ ವಿರುದ್ಧ 6-5 ಅಂಕದೊಂದಿಗೆ ಗೆಲುವು ಸಾಧಿಸಿ, ಮುನ್ನಡೆದಿದ್ದಾರೆ.
ಇಂದು ಬೆಳಿಗ್ಗೆ ನಡೆದ ರೌಂಡ್ ಆಫ್ 16 ಪ್ರಿಲಿಮಿನರೀಸ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಸತೀಶ್ ಕುಮಾರ್ ಜಮಾಯ್ಕಾದ ರಿಕಾರ್ಡೋ ಬ್ರೌನ್ ಅವರನ್ನು 4:1 ಅಂಕಗಳೊಂದಿಗೆ ಪರಾಜಯಗೊಳಿಸಿದರು. ಪುರುಷರ ಸೂಪರ್ ಹೆವಿ(+91ಕೆಜಿ) ವಿಭಾಗದಲ್ಲಿ ಆಡುತ್ತಿರುವ ಕುಮಾರ್, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದು, ಒಲಿಂಪಿಕ್ಸ್ ಪದಕದಿಂದ ಒಂದು ಹೆಜ್ಜೆ ದೂರವಿದ್ದಾರೆ.
ಪೂಲ್ ಎ ವಿಭಾಗದ ಪಂದ್ಯಗಳಲ್ಲಿ ಭಾರತದ ಪುರುಷರ ಹಾಕಿ ತಂಡ ಅರ್ಜೆಂಟಿನಾದ ಬಲಶಾಲಿ ತಂಡದ ವಿರುದ್ಧ ಗೆಲುವು ಸಾಧಿಸಿದ್ದು, ಕ್ವಾರ್ಟರ್ ಫೈನಲ್ಸ್ ಹಂತ ತಲುಪಿದೆ. ನಮ್ಮ ತಂಡದ ಪ್ರತಿಭಾವಂತ ಸದಸ್ಯರಾದ ವಿವೇಕ್ ಸಾಗರ್ ಪ್ರಸಾದ್ ಮತ್ತು ಹರಮನ್ಪ್ರೀತ್ ಸಿಂಗ್ ಗೋಲ್ಗಳನ್ನು ಸಾಧಿಸಿ 3-1 ಅಂಕದೊಂದಿಗೆ ಭಾರತಕ್ಕೆ ಗೆಲುವು ತಂದರು.
ಬ್ಯಾಡ್ಮಿಂಟನ್ ಚ್ಯಾಂಪಿಯನ್ ಪಿ.ವಿ.ಸಿಂಧು ಅವರು ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಡ್ಟ್ ವಿರುದ್ಧ 21-15, 21-13 ಅಂಕಗಳನ್ನು ಗಳಿಸಿ, ಗೆಲುವು ಪಡೆದರು. ಇದರೊಂದಿಗೆ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಸ್ಗೆ ತಲುಪಿರುವ ಸಿಂಧು, ಇಂದು ರೌಂಡ್ ಆಫ್ 16 ಪಂದ್ಯಗಳನ್ನು ಆಡಲಿದ್ದಾರೆ.
ಮಹಿಳೆಯರ ಶೂಟಿಂಗ್: 25ಮೀ ಪಿಸ್ತೋಲ್ ಕ್ವಾಲಿಫಿಕೇಷನ್ ಪ್ರಿಸಿಷನ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ 292 ಅಂಕಗಳೊಂದಿಗೆ 5ನೇ ರಾಂಕ್ನಲ್ಲಿದ್ದಾರೆ. ಸರ್ನೋಬತ್ ರಾಹಿ ಅವರು 287 ಅಂಕಗಳೊಂದಿಗೆ 25ನೇ ರಾಂಕ್ನಲ್ಲಿದ್ದಾರೆ. ರಾಪಿಡ್ ಫೈರ್ ಹಂತದ ಸ್ಪರ್ಧೆಗಳು ನಾಳೆ ನಡೆಯಲಿದ್ದು, ಇದರಲ್ಲಿ ಟಾಪ್ 8 ಆಟಗಾರರು ಫೈನಲ್ಸ್ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತಿಳಿಸಿದೆ. (ಏಜೆನ್ಸೀಸ್)