ಪದಕ ತಂದ ಪದವಿ: ಮೀರಾಬಾಯಿ ಆಗಲಿದ್ದಾರೆ ಉನ್ನತ ಪೊಲೀಸ್​ ಅಧಿಕಾರಿ!

chanum
Published on

ಇಂಫಾಲ್ : ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ವಿಜಯ ಪತಾಕೆ ಹಾರಿಸಿ, ಇಂದು ದೇಶಕ್ಕೆ ಮರಳಿದ ವೇಯ್ಟ್​ ಲಿಫ್ಟರ್​ ಸೈಖೋಂ ಮೀರಾಬಾಯಿ ಚಾನು ಅವರನ್ನು ಮಣಿಪುರ ಪೊಲೀಸ್​ ಇಲಾಖೆಯಲ್ಲಿ ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್​ ಆಗಿ ನೇಮಕ ಮಾಡಲಾಗುವುದು ಎಂದು ರಾಜ್ಯದ ಸಿಎಂ ಎನ್​.ಬೈರೆನ್ ಸಿಂಗ್ ಹೇಳಿದ್ದಾರೆ.

ರಾಜ್ಯಕ್ಕೆ ಕೀರ್ತಿ ತಂದಿರುವ ಚಾನು ಅವರಿಗೆ 1 ಕೋಟಿ ರೂ. ಬಹುಮಾನವನ್ನೂ ನೀಡಲಾಗುವುದು ಎಂದಿರುವ ಸಿಎಂ ಸಿಂಗ್, ರಾಜ್ಯದಲ್ಲಿ ಶೀಘ್ರವಾಗಿಯೇ ವಿಶ್ವ ದರ್ಜೆಯ ವೇಯ್ಟ್​ ಲಿಫ್ಟಿಂಗ್ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

ರಾಜ್ಯದ ಜೂಡೋ ಆಟಗಾರ್ತಿ ಎಲ್.ಸುಶೀಲಾ ದೇವಿ ಅವರಿಗೆ ಕಾನ್​​ಸ್ಟೆಬಲ್ ಹುದ್ದೆಯಿಂದ ಸಬ್​ಇನ್ಸ್​ಪೆಕ್ಟರ್ ಆಗಿ ಬಡ್ತಿ ನೀಡಲಾಗುವುದು. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೂ ಮಣಿಪುರ ಸರ್ಕಾರದ ವತಿಯಿಂದ ತಲಾ 25 ಲಕ್ಷ ರೂಪಾಯಿ ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

ಒಲಿಂಪಿಕ್ಸ್​ನಲ್ಲಿ 49 ಕೆಜಿ ಮಹಿಳೆಯರ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಚಾನು ಅವರಿಗೆ ದೇಶದಾದ್ಯಂತದಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಚಾನು ಸೇರಿದಂತೆ ಮಣಿಪುರದಿಂದ 5 ಅಥ್ಲೀಟ್​ಗಳು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net