

ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜಾಗತಿಕ ರಾಜಕೀಯ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾಗಿದ್ದಾರೆ. ಮೋದಿ ವೈಯಕ್ತಿಕ ಖಾತೆಗೆ 7 ಕೋಟಿಗೂ ಹೆಚ್ಚು ಬೆಂಬ ಲಿಗರಿದ್ದಾರೆ. ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಅತ್ಯಂತ ಸಕ್ರಿಯ ರಾಜಕಾರಣಿ ಎಂಬ ಶ್ರೇಯವನ್ನು ಅವರು ಹೊಂದಿದ್ದಾರೆ.
ಮೋದಿ ಗುಜರಾತ್ನ ಸಿಎಂ ಆಗಿದ್ದಾಗ (2009) ಟ್ವಿಟರ್ಗೆ ಸೇರ್ಪಡೆಯಾದರು. 2010ರಲ್ಲಿ ಅವರ ಫಾಲೋಯರ್ಸ್ ಸಂಖ್ಯೆ ಒಂದು ಲಕ್ಷ ಇತ್ತು. ಈಗ ಅದು 7 ಕೋಟಿ ಮೀರಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ 2.63 ಕೋಟಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 1.94 ಕೋಟಿ ಟ್ವಿಟರ್ ಅನುಯಾಯಿಗಳನ್ನು ಹೊಂದಿದ್ದಾರೆ.
ಹೊಸ ಐಟಿ ನಿಯಮ ಪಾಲಿಸಲು ಟ್ವಿಟರ್ ಹಿಂದೇಟು ಹಾಕಿದ ಬಳಿಕ ದೇಶೀಯವಾದ ಮೈಕ್ರೋ ಬ್ಲಾಗಿಂಗ್ ತಾಣ ‘ಕೂ’ ಬಳಕೆಯನ್ನು ಭಾರತ ಸರ್ಕಾರ ಹೆಚ್ಚಿಸಿದೆ. ಸರ್ಕಾರಿ ಇಲಾಖೆಗಳು ಮತ್ತು ಸಚಿವರು ಈಗ ಹೆಚ್ಚಾಗಿ ’ಕೂ’ ಆಪ್ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಪ್ರಧಾನಿ ಮೋದಿ ಇನ್ನೂ ’ಕೂ’ ಆಪ್ಗೆ ಸೇರಿಲ್ಲ.
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ವೈಯಕ್ತಿಕ ಟ್ವೀಟ್ ಖಾತೆಯನ್ನು 3.90 ಕೋಟಿ ಜನರು ಅನುಸರಿಸುತ್ತಿದ್ದಾರೆ. ಅಧ್ಯಕ್ಷರ ಅಧಿಕೃತ ಖಾತೆಗೆ 1.28 ಕೋಟಿ ಫಾಲೋಯರ್ಸ್ ಇದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಮಾಗೆ 1.29 ಕೋಟಿ, ಫ್ರಾನ್ಸ್ನ ಅಧ್ಯಕ್ಷ ಎಮಾನ್ಯುಯಲ್ ಮೆಕ್ರಾನ್ 70.10 ಲಕ್ಷ ಟ್ವಿಟರ್ ಬೆಂಬಲಿಗರು ಇದ್ದಾರೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ಟ್ವಿಟರ್ನಲ್ಲಿ ಹೆಚ್ಚು ಸಕ್ರಿಯವಾಗಿದ್ದ ಜಾಗತಿಕ ನಾಯಕರಾಗಿದ್ದರು. ಆಗ ಅವರ ಫಾಲೋಯರ್ಸ್ ಸಂಖ್ಯೆ 8.87 ಕೋಟಿ. ಆದರೆ, ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ದೃಢೀಕರಣದ ವೇಳೆಯ (ಜನವರಿ 6) ಹಿಂಸಾಚಾರ ಘಟನೆ ನಂತರ ಅವರ ಖಾತೆಯನ್ನು ಟ್ವಿಟರ್ ಕಾಯಂ ಬಂದ್ ಮಾಡಿದೆ.