

ಟೋಕಿಯೋ : ನಿನ್ನೆ ಫ್ಲೈವೇಯ್ಟ್ ಬಾಕ್ಸಿಂಗ್ ಪಂದ್ಯದಲ್ಲಿ ಸೋಲನುಭವಿಸಿ, ಒಲಿಂಪಿಕ್ಸ್ನಿಂದ ಹೊರಬಿದ್ದ ವರ್ಲ್ಡ್ ಚ್ಯಾಂಪಿಯನ್ ಮೇರಿ ಕೋಂ ಅವರು ತಮ್ಮ ಸೋಲಿನ ತೀರ್ಪಿನ ಬಗ್ಗೆ ಅನುಮಾನದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಕೊಲಂಬಿಯಾದ ಇನ್ಗ್ರಿಟ್ ವಾಲೆಂಷಿಯ ವಿರುದ್ಧ ರೌಂಡ್ ಆಫ್ 16 ಪಂದ್ಯ ಆಡುವ ಒಂದು ನಿಮಿಷ ಮುಂಚೆ ತಮಗೆ ರಿಂಗ್ ಡ್ರೆಸ್ ಬದಲಿಸಲು ಹೇಳಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಭಾರತದ ಬಾಕ್ಸರ್ ಮೇರಿ ಅವರು, "ಆಶ್ಚರ್ಯಕರ.. ರಿಂಗ್ ಡ್ರೆಸ್ ಏನಿರಬಹುದು ಎಂದು ಯಾರಾದರೂ ವಿವರಿಸಬಲ್ಲಿರೇ ? ನನ್ನ ಪ್ರೀಕ್ವಾರ್ಟರ್ ಫೈನಲ್ ಪಂದ್ಯದ ಒಂದು ನಿಮಿಷ ಮುನ್ನ ನನಗೆ ನನ್ನ ರಿಂಗ್ ಡ್ರೆಸ್ಸನ್ನು ಬದಲಾಯಿಸಲು ಸೂಚಿಸಲಾಯಿತು. ಯಾರಾದರೂ ವಿವರಿಸಿ" ಎಂದಿದ್ದಾರೆ. ತಮ್ಮ ಈ ಸಂದೇಶಕ್ಕೆ ಒಲಿಂಪಿಕ್ಸ್ ಮಂಡಳಿಯೊಂದಿಗೆ, ಇಂಡಿಯನ್ ಒಲಿಂಪಿಕ್ಸ್ ಕಮಿಟಿ, ಭಾರತದ ಪ್ರಧಾನಿ ಹಾಗೂ ಹಾಲಿ ಮತ್ತು ಮಾಜಿ ಕ್ರೀಡಾ ಸಚಿವರನ್ನು ಅವರು ಟ್ಯಾಗ್ ಮಾಡಿದ್ದಾರೆ.
ಗುರುವಾರದಂದು ಪಂದ್ಯದಲ್ಲಿ ಸೋಲಿನ ಘೋಷಣೆಯಾದ ನಂತರವೂ, ತಾವು ಮುಂಚೆ ಎರಡು ಬಾರಿ ಸೋಲಿಸಿದ್ದ ಕೊಲಂಬಿಯಾದ ಇನಗ್ರಿಟ್ ಪರವಾಗಿ ತೀರ್ಪು ನೀಡಲಾಗಿದ್ದನ್ನು ನಂಬಲಾಗುತ್ತಿಲ್ಲ ಎಂದಿದ್ದರು. "ಅವಳನ್ನು ನಾನು ಮುಂಚೆ ಎರಡು ಬಾರಿ ಸೋಲಿಸಿದ್ದೇನೆ. ರೆಫರೀ ಅವರು ಅವಳ ಕೈಯನ್ನು ಮೇಲಕ್ಕೆತ್ತಿದಾಗ ನನಗೆ ನಂಬಲಾಗಲಿಲ್ಲ. ನಾನು ಸೋತೆ ಎಂದು ನನಗನಿಸಿರಲೇ ಇಲ್ಲ. ನನಗೆ ಅಷ್ಟು ಗ್ಯಾರಂಟಿ ಇತ್ತು" ಎಂದು ಮೇರಿ ಕೋಂ ಹೇಳಿದ್ದರು ಎಂದು ಪಿಟಿಐ ವರದಿ ತಿಳಿಸಿದೆ. (ಏಜೆನ್ಸೀಸ್)