

ನವದೆಹಲಿ: ಪ್ರವಾಹ ಮುಂತಾದ ಪ್ರಾಕೃತಿಕ ವಿಪತ್ತುಗಳು ಸಂಬಂಧಿಕರನ್ನು ಬೇರೆ ಮಾಡಿದ್ದಕ್ಕೆ ಹಲವಾರು ಉದಾಹರಣೆಗಳಿವೆ. ಆದರೆ ಪ್ರವಾಹದ ಕಾರಣಕ್ಕೆ ವರ್ಷಗಳ ಬಳಿಕ ತಾಯಿ-ಮಗ ಒಗ್ಗೂಡಿದ ಅತ್ಯಪರೂಪದ ಪ್ರಕರಣವೊಂದು ಇಲ್ಲಿದೆ.
ತಾಯಿ ಹಾಗೂ ಮಗ 35 ವರ್ಷಗಳ ಬಳಿಕ ಮತ್ತೆ ಪರಸ್ಪರ ನೋಡುವಂತಾಗಲು ಪ್ರವಾಹವೇ ಪ್ರಮುಖವಾಗಿ ಕಾರಣವಾಗಿದೆ. ಪಂಜಾಬ್ನ ಪಟಿಯಾಲಾದಲ್ಲಿ ಈ ಪ್ರಕರಣ ನಡೆದಿದೆ. ಜಗಜಿತ್ ಸಿಂಗ್ ಎಂಬ 37 ವರ್ಷದ ವ್ಯಕ್ತಿ 35 ವರ್ಷಗಳ ಬಳಿಕ ತಾಯಿಯನ್ನು ನೋಡುವಂತಾಗಿದೆ.
ಜಗಜಿತ್ ಸಿಂಗ್ಗೆ 2 ವರ್ಷವಿದ್ದಾಗ ತಂದೆ ತೀರಿಹೋಗಿದ್ದು, ತಾಯಿ ಎರಡನೇ ಮದುವೆಯಾಗಿದ್ದರು. ಆ ಬಳಿಕ ಜಗಜಿತ್ ಸಿಂಗ್ ಅಜ್ಜ-ಅಜ್ಜಿ ಆತನನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಬೆಳೆಸಿದ್ದರು. ಅಲ್ಲದೆ ಜಗಜಿತ್ ತಂದೆ-ತಾಯಿ ಅಪಘಾತದಲ್ಲಿ ತೀರಿಹೋಗಿದ್ದರು ಎಂದು ಸುಳ್ಳು ಹೇಳಿದ್ದರು.
ಆದರೆ ಇತ್ತೀಚೆಗೆ ಪಂಜಾಬ್ನ ಪಟಿಯಾಲದ ಪ್ರವಾಹಪೀಡಿತ ಪ್ರದೇಶಕ್ಕೆ ರಕ್ಷಣಾ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಗಜಿತ್ ಆಗಮಿಸಿದ್ದ. ಪಟಿಯಾಲದ ಬೊಹರ್ಪುರ ಗ್ರಾಮದಲ್ಲಿ ತಾಯಿಯ ತಂದೆ-ತಾಯಿ ಇದ್ದರು ಎಂದು ಸಂಬಂಧಿಕರೊಬ್ಬರು ಹೇಳುತ್ತಿದ್ದುದನ್ನು ನೆನಪಿಸಿಕೊಂಡ ಜಗಜಿತ್ ಆ ಗ್ರಾಮವನ್ನು ಅರಸಿಕೊಂಡು ಹೋಗಿ ವಿಚಾರಿಸಿದ್ದ.
ಬಳಿಕ ತಾನು ಹುಡುಕುತ್ತಿದ್ದ ಮನೆಯ ವಿಳಾಸ ಸಿಕ್ಕಾಗ ಅಲ್ಲಿ ಮಂಚದ ಮೇಲೆ ಮಲಗಿದ್ದ ವೃದ್ಧೆಯೊಬ್ಬಳ ಬಳಿ ವಿಚಾರಿಸಿದಾಗ ಆಕೆಯೇ ತನ್ನ ತಾಯಿಯ ತಾಯಿ ಎಂಬುದು ಗೊತ್ತಾಗಿದೆ. ತನ್ನ ತಾಯಿಯ ತಂದೆ-ತಾಯಿ ಜೀವಂತ ಇದ್ದರು, ಆದರೆ ವೈಮನಸ್ಯದ ಕಾರಣಕ್ಕೆ ನಾವು ಮಾತಾಡುತ್ತಿಲ್ಲ ಎಂದು ಅಜ್ಜ-ಅಜ್ಜಿ ಹೇಳುತ್ತಿದ್ದುದನ್ನು ಜಗಜಿತ್ ಹೇಳಿಕೊಂಡಿದ್ದ.
ತನ್ನ ತಾಯಿಯ ಹೆತ್ತವರ ಕುರಿತು ತಿಳಿದಿದ್ದ ಎಲ್ಲರೂ 2014ರ ಬಳಿಕ ಯಾರೂ ಜೀವಂತ ಇರದ ಕಾರಣ ಹೆಚ್ಚಿನ ವಿಷಯ ಗೊತ್ತಾಗಲಿಲ್ಲ. ಆದರೆ ಸಂಬಂಧಿಯೊಬ್ಬರು ಬೊಹರ್ಪುರ ಎಂಬ ಗ್ರಾಮದ ಕುರಿತು ಹೇಳುತ್ತಿದ್ದುದು ನೆನಪಿದ್ದರಿಂದ ಹುಡುಕಿಕೊಂಡು ಬಂದೆ ಎಂದ ಜಗಜಿತ್ಗೆ ಕೊನೆಗೂ 35 ವರ್ಷಗಳ ಬಳಿಕ ತಾಯಿಯ ದರ್ಶನವಾಗಿದೆ. ಜಗಜಿತ್ ತನ್ನ ಈ ಭಾವುಕ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.