ಪ್ರಯಾಣಿಸುತ್ತಿದ್ದಾಕೆಗೆ ಬಸ್​ನಲ್ಲೇ ಹೆರಿಗೆ ಮಾಡಿಸಿದ ಮಹಿಳಾ ಕಂಡಕ್ಟರ್​

Bus conductor with woman
Published on

ಚಿಕ್ಕಮಗಳೂರು: ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಗೆ ಮಹಿಳಾ ಕಂಡಕ್ಟರ್​ ಬಸ್​ನಲ್ಲೇ ಹೆರಿಗೆ ಮಾಡಿಸಿದ ಅಪರೂಪದ ಪ್ರಸಂಗವೊಂದು ನಡೆದಿದೆ. ಚಿಕ್ಕಮಗಳೂರು ಘಟಕದ ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಈ ಪ್ರಕರಣ ನಡೆದಿದೆ.

ಚಿಕ್ಕಮಗಳೂರು ವಿಭಾಗದ ಚಿಕ್ಕಮಗಳೂರು ಘಟಕದ ವಾಹನ ಸಂಖ್ಯೆ ಕೆಎ-13 ಎಫ್-0855ರಲ್ಲಿ ಬೆಂಗಳೂರು-ಚಿಕ್ಕಮಗಳೂರು ಮಾರ್ಗವಾಗಿ ನಿನ್ನೆ ತೆರಳುತ್ತಿದ್ದಾಗ ಉದಯಪುರ ಸಮೀಪದ ಕೃಷಿ ಕಾಲೇಜು ಹತ್ತಿರ ಮಧ್ಯಾಹ್ನ 1.25ರ ಸುಮಾರಿಗೆ ಈ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಬಸ್​ನಲ್ಲಿ 15 ಪ್ರಯಾಣಿಕರಿದ್ದರು. ಈ ಬಸ್​ನಲ್ಲಿ ಬೇಲೂರಿಗೆ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಉಂಟಾಗಿದ್ದು, ಹತ್ತಿರ ಯಾವುದೂ ಆಸ್ಪತ್ರೆ ಇರಲಿಲ್ಲ. ಆಕೆಗೆ ತಕ್ಷಣದ ಸಹಾಯದ ಅಗತ್ಯವಿರುವುದನ್ನು ಮನಗಂಡ ಬಸ್​ ನಿರ್ವಾಹಕಿ ಹಾಗೂ ಚಾಲಕಿಯೂ ಆಗಿರುವ ಎನ್​. ವಸಂತಮ್ಮ ಕೂಡಲೇ ಬಸ್​ ನಿಲ್ಲಿಸಿದರು.

ನಂತರ ವಾಹನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಬಸ್​ನಿಂದ ಕೆಳಕ್ಕಿಳಿಸಿ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ. ಗರ್ಭಿಣಿ ಮಹಿಳೆ ಆರ್ಥಿಕವಾಗಿ ಸಬಲರಲ್ಲದ್ದರಿಂದ ಆಕೆಯ ತುರ್ತು ಖರ್ಚಿಗಾಗಿ ಪ್ರಯಾಣಿಕರಿಂದ ಒಟ್ಟು 1,500 ರೂ. ಸಂಗ್ರಹಿಸಿ ನೀಡಿರುತ್ತಾರೆ. ಬಳಿಕ ಆ್ಯಂಬುಲೆನ್ಸ್​ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ಕಳುಹಿಸಿ ದಾಖಲಿಸಿರುತ್ತಾರೆ.

ಮಹಿಳೆ ಮತ್ತು ಹೆಣ್ಣು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಸಕಾಲದಲ್ಲಿ ಸ್ಪಂದಿಸಿ ಮಗು ಮತ್ತು ತಾಯಿಯನ್ನು ಉಳಿಸಿ ಮಾನವೀಯತೆ ತೋರಿದ ನಿರ್ವಾಹಕಿಯ ಕಾರ್ಯ ಶ್ಲಾಘನೀಯ ಎಂದಿರುವ ಕೆಎಸ್​ಆರ್​​ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಆಕೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net