ಚುನಾವಣಾ ಫಲಿತಾಂಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ಅಭ್ಯರ್ಥಿ ನಿರ್ಧಾರ

Soumya Reddy
Published on

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ನಿರ್ಧರಿಸಿದ್ದಾರೆ. ಫಲಿತಾಂಶದ ವಿರುದ್ಧ ಕಾನೂನು ಸಮರ ನಡೆಸುತ್ತೇವೆ ಎಂದು ಸೌಮ್ಯಾ ರೆಡ್ಡಿ ತಂದೆ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಕೂಡ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ತೀವ್ರ ಕುತೂಹಲ ಕೆರಳಿಸಿದ ಮತ್ತು ಜಿದ್ದಾಜಿದ್ದಿಯ ಕ್ಷೇತ್ರವಾದ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಕೋರ್ಟ್ ಮೆಟ್ಟಿಲೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಮೊದಲ ಬಾರಿಗೆ ಮತ ಎಣಿಕೆ ನಡೆದಾಗ 160 ಮತಗಳಿಂದ ಸೌಮ್ಯಾ ರೆಡ್ಡಿ ಗೆದ್ದಿರುವುದಾಗಿ ಘೋಷಿಸಲಾಗಿತ್ತು. ಆದರೆ ತದನಂತರ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ, ಸಂಸದ ತೇಜಸ್ವಿಸೂರ್ಯ, ಆರ್. ಅಶೋಕ್ ಮರುಮತ ಎಣಿಕೆಗೆ ಆಗ್ರಹಿಸಿದರು. ಮರುಮತ ಎಣಿಕೆ ವೇಳೆ 16 ಮತಗಳಿಂದ ರಾಮಮೂರ್ತಿ ಮುನ್ನಡೆ ಸಾಧಿಸಿದ್ದರು. ಆದರೆ ಈ ಫಲಿತಾಂಶ ಒಪ್ಪದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಕಾಂಗ್ರೆಸ್ ನಾಯಕರು ಮರುಮತ ಎಣಿಕೆಗೆ ಆಗ್ರಹಿಸಿದ್ದರು. ಒಟ್ಟು 6 ಬಾರಿ ಮರುಮತ ಎಣಿಸಲಾಯಿತು. ಅಂತಿಮವಾಗಿ ಶನಿವಾರ ತಡರಾತ್ರಿ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಗೆದ್ದಿರುವುದಾಗಿ ಚುನಾವಣಾಧಿಕಾರಿಗಳು ಪ್ರಕಟಿಸಿದರು.

ನಾನು ಕೂಡ ಕೋರ್ಟ್‌ಗೆ ಹೋಗುವೆ

ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ನ್ಯಾಯಾಲಯಕ್ಕೆ ಹೋದರೆ ನಾನು ಕೂಡ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಬಿಜೆಪಿಯ ವಿಜೇತ ಅಭ್ಯರ್ಥಿ ಸಿ.ಕೆ ರಾಮಮೂರ್ತಿ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಮಾಂಚಕ ಫಲಿತಾಂಶ ಬಂದಿದೆ. ಹದಿನಾರು ಮತಗಳ ಅಂತರದಿಂದ ಜನ ಗೆಲ್ಲಿಸಿದ್ದಾರೆ. ಸಮಸ್ತ ನಾಗರಿಕರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಇವಿಎಂ ಮತಗಳ ಎಣಿಕೆ ನಂತರ ಪೋಸ್ಟಲ್ ಬ್ಯಾಲೆಟ್ ಮರು ಎಣಿಕೆ ಮಾಡುವಂತೆ ನಾನು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಮರು ಮತ ಎಣಿಕೆ ಮಾಡಿದರು. ಸೌಮ್ಯ ರೆಡ್ಡಿ ಅವರು ಮತ್ತೆ ಅರ್ಜಿ ಕೊಟ್ಟರು. ಅದರಲ್ಲಿ ನಾನು ಗೆದ್ದಿದ್ದೇನೆ. ಆದರೂ ರಾಮಲಿಂಗಾ ರೆಡ್ಡಿ ಸೇರಿ ಎಲ್ಲರೂ ದೌರ್ಜನ್ಯ ಮಾಡಿದರು. ಹೊರಗೆ ಬೇರೆಯವರು ಗಲಾಟೆ ಮಾಡಿದರು. ಸಿಸಿ ಕ್ಯಾಮರಾ ಇದೆ. ರಾಮಲಿಂಗಾರೆಡ್ಡಿ ಮಧ್ಯಾಹ್ನ 3.30ಕ್ಕೆ ಬಂದರು. ಬಳಿಕ ಪೊಲೀಸರು ರಾಮಲಿಂಗಾರೆಡ್ಡಿ ಅವರನ್ನು ಹೊರಗೆ ಕಳಿಸಿದರು. ಅಬ್ಸರ್ವರ್ ಕೂಡ ನಮಗೆ ಸರ್ಟಿಫಿಕೇಟ್ ನೀಡಿದರು. ಕಾಂಗ್ರೆಸ್ ಅವರು ಗೂಂಡಾ ವರ್ತನೆ ತೋರಿದ್ದಾರೆ. ಅವರು ಕೋರ್ಟಿಗೆ ಹೋಗಲಿ. ನಾನೂ ಕೂಡ ಕೋರ್ಟಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net