

ಮಂಗಳೂರು: ಕೆಎಸ್ಆರ್ಟಿಸಿ ಸ್ಲೀಪರ್ ಕೋಚ್ ಬಸ್ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ.
ಕೆಎಸ್ಆರ್ಟಿಸಿ ಬಸ್ ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿತ್ತು. ಅನಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡ ಬಸ್ ಚಾಲಕ, ಆನೆಯನ್ನು ತಪ್ಪಿಸಲು ಯತ್ನಿಸಿದರು. ಆದರೂ ದಾಳಿ ಮಾಡಿದ ಕಾಡಾನೆ ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ. ಅದೃಷ್ಟವಶಾತ್ ಸ್ವಲ್ಪದಲ್ಲೇ ಪ್ರಯಾಣಿಕರು ಪಾರಾಗಿದ್ದಾರೆ.
ಚಾಲಕನ ಸಮಯ ಪ್ರಜ್ಞೆಯಿಂದ ದುರಂತವೊಂದು ತಪ್ಪಿದ್ದು, ಪ್ರಯಾಣಿಕರು ಆನೆ ದಾಳಿ ಸಂಭವದಿಂದ ಪಾರಾಗಿದ್ದಾರೆ. ದಾಳಿಯಿಂದ ಬಸ್ಸಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಬಸ್ ಬೆಂಗಳೂರಿನತ್ತ ತೆರಳಿತು. (ದಿಗ್ವಿಜಯ ನ್ಯೂಸ್)