More

    ಸೈಕ್ಲೋನ್​ನಿಂದ ಕೃಷಿಗೆ ಕಂಟಕ; ಆಹಾರ ಉತ್ಪಾದನೆ ಕುಂಠಿತ

    ಹರೀಶ್ ಬೇಲೂರು
    ಬೆಂಗಳೂರು: ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಪ್ರತಿ ವರ್ಷ ಉಂಟಾಗುವ ಸೈಕ್ಲೋನ್​ನಿಂದ ಅನುಕೂಲವಾಗಬೇಕಿದ್ದ ರೈತರಿಗೆ ಹೆಚ್ಚಾಗಿ ಕಂಟಕವಾಗುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಆಹಾರ ಉತ್ಪಾದನೆ ಕುಂಠಿತವಾಗುತ್ತಿದೆ.

    ವಿಶೇಷವಾಗಿ ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯಲ್ಲೇ ರೂಪುಗೊಳ್ಳುವ ಚಂಡಮಾರುತದಿಂದ ಕೃಷಿ ಕ್ಷೇತ್ರದ ಮೇಲೆ ಹೆಚ್ಚಾಗಿ ಪರಿಣಾಮ ಬೀರುವಂತಾಗಿದೆ. ಕಟಾವಿಗೆ ಬಂದಿರುವ ವಿವಿಧ ಬಗೆಯ ಶೇ. 75 ಬೆಳೆಗಳು ಹಾಳಾಗುತ್ತಿವೆ. ಅಲ್ಲದೆ, ಮುಂಗಾರು ಪೂರ್ವ ಅವಧಿಯಲ್ಲಿ ಉಂಟಾಗುವ ಚಂಡಮಾರುತದಿಂದ ಮುಂಗಾರು ಮಾರುತಗಳ ಆಗಮನದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ತಡವಾಗಿ ಮಾರುತಗಳ ಆಗಮನದಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನಡೆ ಉಂಟಾಗುತ್ತಿದೆ.

    ಮುಂಗಾರು ಪೂರ್ವದಲ್ಲಿ ಬೀಳುವ ಮಳೆಯಿಂದಾಗಿ ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಜಮೀನು ಹದ ಮಾಡುವ ಕಾರ್ಯ ನಡೆಯುತ್ತದೆ. ಬಳಿಕ, ವಾಡಿಕೆಯಂತೆ ಜೂನ್ ಮೊದಲ ವಾರ ಅಥವಾ ವಾಡಿಕೆಗಿಂತ ಮುನ್ನ ನೈಋತ್ಯ ಮಾನ್ಸೂನ್ (ಮುಂಗಾರು ಮಳೆ) ಆಗಮನವಾದರೆ ಬಿತ್ತನೆ ಕಾರ್ಯ ಶುರುವಾಗುತ್ತದೆ. ಆದರೆ, ಮುಂಗಾರು ಪೂರ್ವದಲ್ಲಿ ಉಂಟಾಗುವ ಚಂಡಮಾರುತದಿಂದ ತೇವಾಂಶ ಕೊರತೆ, ಗಾಳಿ ವೇಗ ಇಲ್ಲದಿರುವುದು ಹಾಗೂ ತೇವಾಂಶ ಭರಿತ ಮೋಡಗಳನ್ನು ಸೆಳೆದುಕೊಳ್ಳುವುದು ಸೇರಿ ವಿವಿಧ ಕಾರಣಗಳಿಂದ ವಾಡಿಕೆಯಂತೆ ಆಗಮನವಾಗಬೇಕಿದ್ದ ಮಾರುತಗಳ ಮೇಲೆ ಪರಿಣಾಮ ಬೀರುತ್ತದೆ. ಮಾರುತಗಳ ಆಗಮನವಾದರೂ ದುರ್ಬಲಗೊಂಡು ಅಷ್ಟಾಗಿ ಮಳೆ ಸುರಿಯುವುದಿಲ್ಲ.

    ಫಸಲು ಬೆಳೆಗಳು ಹಾಳು

    ಮುಂಗಾರು ಸಂದರ್ಭದಲ್ಲಿ ಸ್ವಲ್ಪ ಬೀಳುವ ಮಳೆಯಿಂದ ಬಿತ್ತನೆ ಬೀಜ ಬಿತ್ತುವ ರೈತರು ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ (ಈಶಾನ್ಯ ಮಾನ್ಸೂನ್-ಹಿಂಗಾರು ಮಳೆ) ಫಸಲಿಗೆ ಬರುವ ಬೆಳೆಗಳನ್ನು ಕೂಯ್ಲು ಮಾಡಲು ಸಿದ್ಧತೆ ನಡೆಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯಲ್ಲಿ ಸಂಭವಿಸುವ ಸೈಕ್ಲೋನ್​ನಿಂದಲೇ ಫಸಲಿಗೆ ಬಂದಿರುವ ರಾಗಿ, ಜೋಳ, ಭತ್ತ, ಈರುಳ್ಳಿ, ಕಾಫಿ, ಅಡಕೆ, ಕಾಳುಮೆಣಸು, ಬಾಳೆ, ಪಪ್ಪಾಯಿ, ಆಲೂಗಡ್ಡೆ, ಮೆಣಸಿನಕಾಯಿ, ಹೆಸರು, ಗೋವಿನ ಜೋಳ, ಶೇಂಗಾ ಹಾಗೂ ಹತ್ತಿ ಸೇರಿ ವಿವಿಧ ಬೆಳೆಗಳು ಹಾಳಾಗುತ್ತವೆ.

    10 ವರ್ಷಗಳಲ್ಲಿ 40 ಬಾರಿ ಚಂಡಮಾರುತ

    2011ರಿಂದ 2020ರವರೆಗೆ 40 ಬಾರಿ ಸೈಕ್ಲೋನ್ ಆಗಿದೆ. 2019ರಲ್ಲಿ ಅತಿ ಹೆಚ್ಚು 8 ಬಾರಿ ಸೈಕ್ಲೋನ್ ರೂಪುಗೊಂಡಿದೆ. 2011 ಮತ್ತು 2012ರಲ್ಲಿ ತಲಾ 2 ಬಾರಿ, 2013ರಲ್ಲಿ 5 ಬಾರಿ, 2014ರಲ್ಲಿ 3 ಬಾರಿ, 2015ರಲ್ಲಿ 4 ಬಾರಿ, 2016ರಲ್ಲಿ 4 ಬಾರಿ, 2017ರಲ್ಲಿ 3 ಬಾರಿ ಹಾಗೂ 2020ರಲ್ಲಿ 2 ಬಾರಿ ಸೈಕ್ಲೋನ್ ಸಂಭವಿಸಿದೆ. ಭಾರತ ಅಂದಾಜು 7,516 ಕಿಮೀ ಉದ್ದದ ಕರಾವಳಿ ಪ್ರದೇಶ ಹೊಂದಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಅಂದಾಜು 32 ಕೋಟಿ ಜನರು ಸೈಕ್ಲೋನ್ ಸಂಬಂಧಿತ ಅಪಾಯಗಳಿಗೆ ತುತ್ತಾಗುತ್ತಿದ್ದಾರೆ. ಕರ್ನಾಟಕದಲ್ಲಿ ಅಂದಾಜು 320 ಕಿಮೀ ಕರಾವಳಿ ಪ್ರದೇಶವಿದೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಅರಬ್ಬಿ ಸಮುದ್ರ ಗಡಿ ಇದೆ. ಕರಾವಳಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಸೈಕ್ಲೋನ್​ದಿಂದ ಅಪಾಯ ಹೆಚ್ಚಾಗಿದೆ. ಪ್ರತಿ ವರ್ಷ ಪ್ರಪಂಚದಾದ್ಯಂತ 80 ಚಂಡಮಾರುತಗಳು ರೂಪುಗೊಳ್ಳುತ್ತವೆ. ಈಶಾನ್ಯ ಮಾರುತ ಸಂದರ್ಭದಲ್ಲಿ ರಾಜ್ಯದಲ್ಲಿ ಸೈಕ್ಲೋನ್​ನಿಂದ ಹೆಚ್ಚು ಅಪಾಯವಾಗುತ್ತಿದೆ. 2011ರಿಂದ 2020ರವರೆಗೆ 25 ಬಾರಿ ಅರಬ್ಬಿ ಸಮುದ್ರದಲ್ಲಿ ಹಾಗೂ 15 ಬಾರಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದೆ. ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯಲ್ಲಿ 26 ಬಾರಿ ಸೈಕ್ಲೋನ್ ಉಂಟಾಗಿದೆ.

    ದಕ್ಷಿಣ ರಾಜ್ಯಗಳಲ್ಲಿ ಮಳೆಗಾಲ

    ಅಕ್ಟೋಬರ್ 1ರಿಂದ ಡಿಸೆಂಬರ್ 31ರವರೆಗಿನ ಅವಧಿಯನ್ನು ಈಶಾನ್ಯ ಮಾರುತವೆಂದು ಕರೆಯಲಾಗುತ್ತದೆ. ಈಶಾನ್ಯ ಮಾರುತ ದಕ್ಷಿಣ ರಾಜ್ಯಗಳಲ್ಲಿ ಪ್ರಧಾನ ಮಳೆಗಾಲವಾಗಿದೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತಮಿಳುನಾಡು, ಪಾಂಡಿಚೇರಿಗೆ ಉತ್ತಮ ಮಳೆ ತರಲಿದೆ. ತಮಿಳುನಾಡಿಗೆ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ. 48 ಮಳೆ ಈಶಾನ್ಯ ಮಾರುತದಿಂದ ಆಗುತ್ತದೆ. ದಕ್ಷಿಣ ಕರ್ನಾಟಕ ಭಾಗದ ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಇತರ ಜಿಲ್ಲೆಗಳ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ. 30 ಈಶಾನ್ಯ ಮಾರುತದಿಂದ ಉಂಟಾಗುತ್ತದೆ. ದಕ್ಷಿಣ ಒಳನಾಡಿನಲ್ಲಿ ಒಟ್ಟು ವಾರ್ಷಿಕ ಮಳೆ 1,019 ಮಿಮೀ ಇದ್ದು, ಇದರಲ್ಲಿ 210 ಮಿಮೀ ಮಳೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್​ನಲ್ಲಿ ಬೀಳುತ್ತದೆ. ಇದರಲ್ಲಿ ಅಕ್ಟೋಬರ್​ನಲ್ಲಿ ಅತಿ ಹೆಚ್ಚು ಅಂದರೆ ಅಂದಾಜು 171 ಮಿಮೀ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಅಂದಾಜಿಸಿದೆ.

    ಈಶಾನ್ಯ ಮಾನ್ಸೂನ್​ನಲ್ಲೇ ಹೆಚ್ಚು

    ಫೆಸಿಫಿಕ್ ಸಾಗರ ಉದ್ದ, ವಿಶಾಲ ಮತ್ತು ಅಳವಾಗಿದೆ. ಸೈಕ್ಲೋನ್ ಬಲಗೊಳ್ಳುವುದಕ್ಕೆ ಶಕ್ತಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ಮಾನ್ಸೂನ್ ಸಂದರ್ಭದಲ್ಲಿ ಹೆಚ್ಚು ಸೈಕ್ಲೋನ್​ಗಳು ಉಂಟಾಗುತ್ತವೆ. ಫೆಸಿಫಿಕ್ ಸಾಗರದಂತೆ ಅರಬ್ಬಿ ಸಮುದ್ರ ಅಷ್ಟೊಂದು ವಿಶಾಲ ಮತ್ತು ಅಳ ಇಲ್ಲ. ಇದರಿಂದಾಗಿ ಸೈಕ್ಲೋನ್ ರೂಪುಗೊಳ್ಳಲು ಅಷ್ಟೊಂದು ಶಕ್ತಿ ಸಿಗುವುದಿಲ್ಲ. ಆದ್ದರಿಂದ, ನೈಋತ್ಯ ಮಾನ್ಸೂನ್​ಗಿಂತ ಈಶಾನ್ಯ ಮಾನ್ಸೂನ್ ಅವಧಿಯಲ್ಲಿ ಹೆಚ್ಚು ಸೈಕ್ಲೋನ್​ಗಳು ರೂಪುಗೊಳ್ಳುತ್ತವೆ. ರಾಜ್ಯದಲ್ಲಿ ವಾರ್ಷಿಕವಾಗಿ 1,150 ಮಿಮೀ ಮಳೆಯಾಗುತ್ತದೆ. ಶೇ. 73 ಮುಂಗಾರು, ಶೇ.15 ಹಿಂಗಾರು ಹಾಗೂ ಶೇ.10 ಮುಂಗಾರು ಪೂರ್ವ ಮಳೆಯಾಗುತ್ತದೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ. 30 ಈಶಾನ್ಯ ಮಾರುತದಿಂದ ಸುರಿಯುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts