ರಾಮಲಲ್ಲಾ ಪ್ರಾಣಪ್ರತಿಷ್ಠೆ ಉತ್ಸವ; ಡಿಸೆಂಬರ್ ಅಥವಾ ಜನವರಿಯಲ್ಲಿ ಕಾರ್ಯಕ್ರಮ | ಪ್ರಧಾನಿ ಮೋದಿ ಭಾಗಿ

Ram Mandir
Published on

ನವದೆಹಲಿ: ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹವನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಸ್ಥಾಪಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ ಎನ್ನ ಲಾಗಿದೆ. ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ. ಇದೇ ಸಂದರ್ಭದಲ್ಲಿ 7 ದಿನಗಳ ಕಾಲ ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.

ಟ್ರಸ್ಟ್​ನ ಸಭೆಯ ನಂತರ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈ ಮಾಹಿತಿ ನೀಡಿದ್ದಾರೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಇದಕ್ಕಾಗಿ ವಿದ್ವಾಂಸರು, ಪಂಡಿತರ ಜತೆ ಚರ್ಚೆ ನಡೆಸಲಾಗುತ್ತಿದೆ. ರಾಮ ಮಂದಿರದ ನೆಲ ಮಹಡಿ ಹಾಗೂ ಗರ್ಭಗುಡಿಯ ಕಾಮಗಾರಿ ಡಿಸೆಂಬರ್ 15ರೊಳಗೆ ಪೂರ್ಣಗೊಳ್ಳಲಿದೆ. ಇದಾದ ನಂತರ ಪ್ರಾಣ ಪ್ರತಿಷ್ಠೆಗೆ ಸಿದ್ಧತೆಗಳು ನಡೆಯಲಿವೆ. ನೆಲ ಅಂತಸ್ತಿನ ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ ಮೊದಲ ವಾರ ಮತ್ತು ಜನವರಿ 26ರ ನಡುವೆ ಕಾರ್ಯಕ್ರಮದ ಸಂಭವನೀಯ ದಿನಾಂಕದ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ತಿಳಿಸಲಾಗುವುದು. ನಂತರ ಅಂತಿಮ ದಿನಾಂಕ ನಿರ್ಧಾರ ಮಾಡಲಾಗುತ್ತದೆ. ಏಳು ದಿನಗಳ ಕಾಲ ಉತ್ಸವ ನಡೆಯಲಿದೆ. ದೇಶದಾದ್ಯಂತ ಸಂತರು ಮತ್ತು ಧಾರ್ವಿುಕ ಮುಖಂಡರನ್ನು ಆಹ್ವಾನಿಸಲಾಗುವುದು. ಅಯೋಧ್ಯೆಗೆ ಬರಲು ಸಾಧ್ಯವಾಗದವರು ಅವರಿರುವ ಸ್ಥಳಗಳಲ್ಲಿ ಪ್ರಾಣ ಪ್ರತಿಷ್ಠೆಯನ್ನು ಆಚರಿಸಲು ವಿನಂತಿಸ ಲಾಗುವುದು ಎಂದು ಚಂಪತ್ ರೈ ಹೇಳಿದ್ದಾರೆ.

ಇಂದು ಘೊಷಣೆ

ಜೂನ್ 2 ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷರಾದ ಮಹಾಂತ ನೃತ್ಯ ಗೋಪಾಲ್ ದಾಸ್ ಅವರ ಜನ್ಮದಿನ. ಹೀಗಾಗಿ ವಿಶೇಷ ಸಭೆ ಆಯೋಜನೆ ಮಾಡಲಾಗಿದೆ. ರಾಮಮಂದಿರದ ಟ್ರಸ್ಟ್ ಮತ್ತು ದೇಶದ ಅನೇಕ ಸಂತರು ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ರಾಮಲಲ್ಲಾ ವಿಗ್ರಹ ಕುರಿತು ಈ ವೇಳೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ನಾಲ್ಕು ತಿಂಗಳು ಬೇಕು

ಈ ವಿಗ್ರಹಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಸುಮಾರು 4 ತಿಂಗಳು ಬೇಕಾಗುತ್ತದೆ. ರಾಮಸೇವಕಪುರಂನಲ್ಲಿ ಎರಡು ವಿಗ್ರಹ ರೂಪುಗೊಂಡರೆ, ಅದರ ಮುಂಭಾಗದ ಆವರಣದಲ್ಲಿ ರಾಜಸ್ಥಾನದ ಮಾರ್ಬಲ್ ಸ್ಟೋನ್​ನಿಂದ ಮತ್ತೊಂದು ವಿಗ್ರಹ ಕೆತ್ತನೆ ಮಾಡಲಾಗುತ್ತದೆ. ಕರ್ನಾಟಕದ ಕುಶಲಕರ್ವಿು ಗಣೇಶ್ ಎಲ್. ಭಟ್ಟ ಮತ್ತು ರಾಜಸ್ಥಾನದ ಕುಶಲಕರ್ವಿು ಸತ್ಯನಾರಾಯಣ ಪಾಂಡೆ ನೇತೃತ್ವದಲ್ಲಿ ಕೆಲಸ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net