More

    ಗುಲಾಬಿ ಕೃಷಿಯಲ್ಲಿ ಹರುಷ ಕಂಡ ಹರ್ಷವರ್ಧನ

    ವಿವಿಧ ಬಣ್ಣದ ಡಚ್ ರೋಜ್ ಬೇಸಾಯ ಕೀಟಬಾಧೆ ನಿರ್ವಹಣೆಗೆ ಪಾಲಿಹೌಸ್ ನಿರ್ಮಾಣ

     

     

    ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ


    ಕೃಷಿ ಎಂದರೆ ಮೂಗುಮುರಿಯುವ ಯುವಪೀಳಿಗೆಯ ಮಧ್ಯೆಯೇ ರಾಮನಗರದ ಅರ್ಚಕರಹಳ್ಳಿಯ ಯುವಕ ಹರ್ಷವರ್ಧನ ಗುಲಾಬಿ ಹೂವು, ತೆಂಗು, ಅಡಕೆ ಬೆಳೆದು ಲಾಭಗಳಿಸುವ ಮೂಲಕ ಕೃಷಿಯಲ್ಲೇ ಹರ್ಷ ಕಂಡುಕೊಂಡಿದ್ದಾರೆ. ನಗರಕ್ಕೆ ಹೊಂದಿಕೊಂಡಿರುವ ಅರ್ಚಕರಹಳ್ಳಿ ಬಳಿ ಹರ್ಷವರ್ಧನ ಸುಮಾರು 6 ಎಕರೆ ಜಮೀನಿನಲ್ಲಿ ಅಡಕೆ, ತೆಂಗು ತೋಟ, ಉಳಿದ ಜಾಗದಲ್ಲಿ ಅಡಕೆ, ತೆಂಗು ನರ್ಸರಿ ಇದ್ದು, ವಿಶೇಷವಾಗಿ ವೈಜ್ಞಾನಿಕ ವಿಧಾನದ ಗುಲಾಬಿ ಹೂವು ಬೇಸಾಯದಿಂದ ಲಾಭ ಕಾಣುತ್ತಿದ್ದಾರೆ.

    ಹನಿ ನೀರಾವರಿ ಪದ್ಧತಿ


    ಹರ್ಷವರ್ಧನ ತೋಟದಲ್ಲಿ ಐದು ಕೊಳವೆಬಾವಿ, ಒಂದು ನೆಲಬಾವಿ, ಒಂದು ದೊಡ್ಡ ನೀರಿನ ತೊಟ್ಟಿ ಇದ್ದು, ನರ್ಸರಿ ಹಾಗೂ ಗುಲಾಬಿ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನೀರಿನ ಕೊರತೆ ನೀಗಿಸಿಕೊಂಡಿದ್ದಾರೆ.

    ಡಚ್ ರೋಜ್ ವಿಶೇಷ

    ಗುಲಾಬಿ ಕೃಷಿಯಲ್ಲಿ ಹರುಷ ಕಂಡ ಹರ್ಷವರ್ಧನ
    ತೋಟದಲ್ಲಿನ ತೆಂಗಿನ ಕಾಯಿಗಳನ್ನು ಕೊಬ್ಬರಿ ಮಾಡಿ, ತಿಪಟೂರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಹರ್ಷವರ್ಧನ, ಅಡಕೆ ಫಸಲನ್ನು ಗುತ್ತಿಗೆ ಆಧಾರದಲ್ಲಿ ನೀಡಿದ್ದಾರೆ. ಗುಲಾಬಿ ಹೂವು ಕೃಷಿ ರಾಮನಗರ ಭಾಗದಲ್ಲಿ ಅಪರೂಪವಾಗಿದ್ದು, ಗುಲಾಬಿ ಹೂವು ಬೆಳೆ ಜತೆಗೆ ನರ್ಸರಿ ಗಿಡಗಳ ಮಾರಾಟದಿಂದ ಉತ್ತಮ ಲಾಭ ಕಂಡುಕೊಂಡಿದ್ದಾರೆ. ಹೊಸಹೊಸ ತಳಿಯ ಗುಲಾಬಿ ಹೂವು ಬೆಳೆಯುವಲ್ಲಿ ಆಸಕ್ತಿ ತೋರಿದ್ದಾರೆ. ಪ್ರಸ್ತುತ ಜಮೀನಿನಲ್ಲಿ ಡಚ್‌ರೋಜ್ ಹೆಸರಿನ ವಿವಿಧ ಬಣ್ಣಗಳ ಗುಲಾಬಿ ಹೂವು ಬೆಳೆಯುತ್ತಿದ್ದಾರೆ. ಬೆಳೆಗೆ ಹೆಚ್ಚಾಗಿ ರಸಗೊಬ್ಬರ ನೀಡದೆ ಕೊಟ್ಟಿಗೆ ಗೊಬ್ಬರವನ್ನೇ ನೀಡಿ ಹೆಚ್ಚಿನ ರೀತಿಯಲ್ಲಿ ಸಾವಯವ ಕೃಷಿಯತ್ತ ಚಿತ್ತಹರಿಸಿದ್ದಾರೆ.

    5 ಲಕ್ಷ ಸಸಿ ಮಾರಾಟ


    ತೋಟದಲ್ಲೇ ಬೆಳೆದ ಗುಣಮಟ್ಟದ ಅಡಕೆ, ತೆಂಗು ಗಿಡಗಳಲ್ಲಿ ಉತ್ತಮ ಕಾಯಿ ಆಯ್ದುಕೊಂಡು ನರ್ಸರಿ ಮೂಲಕ ಅಡಕೆ, ತೆಂಗು ಸಸಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಸಿರುವ ಹರ್ಷವರ್ಧನ್ ಪ್ರತಿವರ್ಷ 5 ಲಕ್ಷ ಸಸಿಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ.

    ಮಾರುಕಟ್ಟೆ: ಹರ್ಷವರ್ಧನ್ ಅವರ ತೋಟದಲ್ಲಿ ಬೆಳೆದ ಗುಲಾಬಿ ಹೂವುಗಳನ್ನು ಬೆಂಗಳೂರಿನ ಹೆಬ್ಬಾಳ ಹೂವು ಮಾರುಕಟ್ಟೆಯಲ್ಲಿ ಇವರದೇ ಲೇಬಲ್ ಪ್ಯಾಕ್‌ನಲ್ಲಿ ಮಾರಾಟ ಮಾಡುತ್ತಾರೆ. ಹಾಗಾಗಿ ಹೆಚ್ಚಿನ ಬೇಡಿಕೆ ಜತೆಗೆ ಲಾಭವೂ ಉತ್ತಮವಾಗಿದೆ ಎಂಬುದು ಹರ್ಷವರ್ಧನ ಮಾತು.

    ಪಾಲಿಹೌಸ್


    ಗುಲಾಬಿ ಹೂವು ಬೆಳೆ ಮತ್ತು ನರ್ಸರಿಗೆ ವಿಶೇಷವಾಗಿ ಕೀಟಬಾಧೆ, ನೀರಿನ ಕೊರತೆ ಉಂಟಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ ವೈಜ್ಞಾನಿಕ ರೀತಿಯಲ್ಲೇ ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಬಿಳಿ, ಕೆಂಪು, ಹಳದಿ, ಮುಂತಾದ ಬಣ್ಣದ ಗುಲಾಬಿ ಹೂವು ಸೇರಿ ಪ್ರತಿ ಬಾರಿ ಸುಮಾರು 10 ಸಾವಿರ ಅಡಕೆ, ತೆಂಗು ಗಿಡಗಳನ್ನು ಬೆಳೆಸಲಾಗುತ್ತದೆ ಎನ್ನುತ್ತಾರೆ ಹರ್ಷವರ್ಧನ.

    ನೀರಿನಹೊಂಡ

    ಗುಲಾಬಿ ಕೃಷಿಯಲ್ಲಿ ಹರುಷ ಕಂಡ ಹರ್ಷವರ್ಧನ
    ವಿದ್ಯುತ್ ಇಲ್ಲದ ಸಮಯದಲ್ಲಿ ಬೆಳೆಗಳಿಗೆ ಅಗತ್ಯ ನೀರೊದಗಿಸಲು ಸಹಾಯವಾಗುವಂತೆ ಬೃಹತ್ ಸಿಮೆಂಟ್ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿದ್ದು, ಇದರಿಂದ ಕೃಷಿಗೆ ನೀರಿನ ಕೊರತೆಯಾಗದಂತೆ ಮಾಡಲಾಗಿದೆ. ತೆಗೆ ಕಲ್ಲಿನ ಕಟ್ಟಡದ ಹಳೇ ನೆಲಬಾವಿ ಇದ್ದು, ಮಳೆಗಾಲದಲ್ಲಿ ನೀರು ತುಂಬುವ ಕಾರಣ ಜಮೀನಿನಲ್ಲಿರುವ ಕೊಳವೆಬಾವಿಗಳಿಗೆ ಅಂತರ್ಜಲ ಕೊರತೆ ನೀಗಿಸುತ್ತಾ ಬಂದಿದೆ.


    ಗುಲಾಬಿ ಕೃಷಿಯಲ್ಲಿ ಹರುಷ ಕಂಡ ಹರ್ಷವರ್ಧನಗುಲಾಬಿ ಹೂವು, ನರ್ಸರಿ ಗಿಡ ಬೆಳೆಸುವುದು ನನಗೆ ಇಷ್ಟದ ಕೆಲಸ. ಕೇವಲ ಲಾಭದ ದೃಷ್ಟಿಯಿಂದ ಕೃಷಿ ಮಾಡುತ್ತಿಲ್ಲ. ಕೃಷಿ ನನಗೆ ಖುಷಿ ತರಿಸಿದ್ದು, ಎಂದೂ ನಿರಾಸೆ ಮಾಡದೆ ಲಾಭ ನೀಡುತ್ತಿದೆ. ನನ್ನ ಕುಟುಂಬ ಕೂಡ ಕೃಷಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿದೆ. ಹೊಸಹೊಸ ತಳಿಯ ಆಕರ್ಷಕ ವಿಶೇಷ ಗುಲಾಬಿ ಹೂವು ಬೆಳೆಯಬೇಕೆಂಬ ಚಿಂತನೆ ಇದೆ. ತೆಗೆ ನರ್ಸರಿಯನ್ನು ಮತ್ತಷ್ಟು ವಿಸ್ತರಣೆ ಮಾಡುವ ಗುರಿ ಹೊಂದಿದ್ದೇನೆ.
    ಹರ್ಷವರ್ಧನ, ಯುವ ರೈತ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts