ಏನಾಯ್ತು ಇವರಿಗೆಲ್ಲ? ಇಂದ್ಯಾಕೆ ಈ ಥರ..?: ಇಲ್ಲಿದೆ ವಿವರ…

EAK (1)
Published on

ಬೆಂಗಳೂರು: ನಟ ದಿಗಂತ್, ನಟಿಯರಾದ ನಿಧಿ ಸುಬ್ಬಯ್ಯ, ಧನು ಹರ್ಷ, ನಿರ್ದೇಶಕ ಸಮರ್ಥ್, ನಿರ್ಮಾಪಕ ಗುರುದತ್ ಗಾಣಿಗ.. ಹೀಗೆ ಒಂದಿಡೀ ಚಿತ್ರತಂಡ ಕೈಗೆ ಹೀಗೊಂದು ಬ್ಯಾಂಡೇಜ್ ಥರ ಹಾಕಿಕೊಂಡು ಒಟ್ಟಿಗೇ ಕಾಣಿಸಿಕೊಂಡಿದ್ದು ನೋಡಿದವರಿಗೊಮ್ಮೆ, 'ಏನಾಯ್ತು ಇವರಿಗೆಲ್ಲ?' ಎಂದು ಅನಿಸಿದರೂ ಅಚ್ಚರಿ ಏನಿಲ್ಲ.

ಅಷ್ಟಕ್ಕೂ ಅವರು ಹೀಗೆ ಕಾಣಿಸಿಕೊಂಡಿದ್ದಂತೂ ನಿಜ. ಅದಕ್ಕೆ ಈ ದಿನವೇ ಕಾರಣ. ಮಾತ್ರವಲ್ಲ, ಈ ತಂಡದ ಸಿನಿಮಾ ಕೂಡ. ಹೌದು.. 'ಎಡಗೈಯೇ ಅಪಘಾತಕ್ಕೆ ಕಾರಣ' ಎಂಬ ಶೀರ್ಷಿಕೆಯ ಚಿತ್ರ ಮಾಡುತ್ತಿರುವ ತಂಡ ಇಂದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನವಾದ್ದರಿಂದ ಹೀಗೆ ವಿಭಿನ್ನವಾಗಿ ಕಾಣಿಸಿಕೊಂಡಿದೆ. ಎಡಗೈ ಬಳಸುವವರ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ 'ವೇಗ' ಹೆಲ್ಮೆಟ್​ ಕಂಪನಿ ಕೂಡ ಸಾಥ್ ನೀಡಿದ್ದು, ಎಡಗೈ ಬಳಕೆದಾರರಿಗೆ ಅನುಕೂಲವಾಗುವಂಥ ವಿಶೇಷ ಹೆಲ್ಮೆಟ್​ವೊಂದನ್ನು ವಿನ್ಯಾಸಗೊಳಿಸಿದೆ. ಅದನ್ನು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನವಾದ ಇಂದು ಬಿಡುಗಡೆ ಮಾಡಲಾಗಿದೆ.

'ವೇಗ' ಕಂಪನಿಗೆ ಇಂತಹದೊಂದು ಐಡಿಯಾ ಬರಲು ಕಾರಣ ಎಡಗೈ ಬಳಸುವವರನ್ನೇ ಕಥಾಹಂದರವಾಗಿ ಹೊಂದಿರುವ 'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾ. ಈ ಚಿತ್ರದ ಪ್ರೇರಣೆಯಿಂದ 'ವೇಗ 1308 ಸೌತ್ ಪಾವ್' ಎಂಬ ವಿಶೇಷ ಹೆಲ್ಮೆಟ್ ಲಾಂಚ್ ಮಾಡಿದೆ. ಈ ಹೆಲ್ಮೆಟ್ ISI ಮತ್ತು DOT ಸರ್ಟಿಫಿಕೇಟ್​ ಹೊಂದಿದೆ. ಖಾಸಗಿ ಹೋಟೆಲ್​​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಹಾಗೂ ವೇಗ ಹೆಲ್ಮೆಟ್ ತಮ್ಮ ಚಿತ್ರಕ್ಕೆ ಬೆಂಬಲವಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ವೇಗ ಹೆಲ್ಮೆಟ್​ ಕಂಪನಿಯ ಮನ್ಮತ್ ಶೆಟ್ಟಿ, ಎಡಗೈ ಬಳಸುವವರಿಗೆ ಸುಲಭವಾಗುವ ರೀತಿ ಹೊಸ ಹೆಲ್ಮೆಟ್ ತಯಾರಿಸಲಾಗಿದೆ. ನಾವು ದಿನನಿತ್ಯ ಹೊಸತನವನ್ನು ಕಲಿಯುತ್ತಿದ್ದೇವೆ. ಅದರಂತೆ ಈ ಪ್ರಾಜೆಕ್ಟ್ ಲಾಂಚ್ ಬಿಡುಗಡೆ ಮಾಡಲಾಗಿದೆ. ಎಡಗೈ ಬಳಸುವ ಶೇ.10ರಷ್ಟು ಮಂದಿಗೆ ಈ ಹೆಲ್ಮೆಟ್ ಉಪಯೋಗವಾಗಲಿದೆ‌ ಎಂದರು.

ನಿರ್ಮಾಪಕ ಗುರುದತ್ ಗಾಣಿಗ ಮಾತನಾಡಿ, ಐಡಿಯಾ ಎಲ್ಲಾ ಶುರುವಾಗಿದ್ದು ಸಮರ್ಥ್ ಅವರಿಂದ. ಇದೊಂದು ವಿಭಿನ್ನ ಕಥೆ. ಈ ರೀತಿ ಸಿನಿಮಾ ಬೇರೆ ಇಂಡಸ್ಟ್ರಿಯಲ್ಲಿ ಬಂದಾಗ ವಾವ್ ಎನ್ನುತ್ತಾರೆ. ಇಂತಹ ಕಥೆಗೆ ನಿರ್ಮಾಪಕರು ಸಿಗಲ್ಲ. ಸ್ನೇಹಿತರು ಇಡೀ ತಂಡದ ಬೆಂಬಲದಿಂದ ಇಲ್ಲಿವರೆಗೂ ಬಂದಿದ್ದೇವೆ. ನಿರ್ದೇಶಕರು ತುಂಬಾ ಚೆನ್ನಾಗಿ ಕಥೆ ಮಾಡಿದ್ದಾರೆ ಎಂದರು.

ನಿರ್ದೇಶಕ ಸಮರ್ಥ್ ಬಿ. ಕಡಕೋಳ್, ಲಾಕ್​​ಡೌನ್ ಟೈಮ್​ನಲ್ಲಿ ಬರೆದ ಕಥೆ ಇದು. ಈ ಕಥೆ ಇಟ್ಕೊಂಡು ಸುಮಾರು ನಿರ್ಮಾಪಕರ ಬಳಿಗೆ ಹೋದೆ.‌ ಕೊನೆಗೆ ಗುರುವನ್ನು ಭೇಟಿಯಾದೆ. ನನ್ನ ಸ್ನೇಹಿತರು, ಜಾಕ್ ಮಂಜು ಅವರ ಬೆಂಬಲದಿಂದ ಸಿನಿಮಾ ಆಗಿದೆ ಎಂದು ತಿಳಿಸಿದರು.

ನಮ್ಮ ಸಿನಿಮಾಗೆ ಸಾಥ್ ಕೊಟ್ಟ 'ವೇಗ'ದವರಿಗೆ ದೊಡ್ಡ ಧನ್ಯವಾದ. ಅವರು ಹೆಲ್ಮೆಟ್ ಜೊತೆ ನಮ್ಮ ಸಿನಿಮಾ ಕಾರ್ಡ್ ಹಾಕಿ ಎಲ್ಲರಿಗೂ ಪ್ರಮೋಷನ್ ಮಾಡುತ್ತಿದ್ದಾರೆ. ಎಡಗೈ ಬಳಸುವವರಿಗೆ 'ವೇಗ' ವಿಶೇಷ ಹೆಲ್ಮೆಟ್ ಲಾಂಚ್ ಮಾಡಿದೆ. 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾದ ಕಥೆ ಅದ್ಭುತವಾಗಿದೆ. ಒಂದೊಳ್ಳೆy ತಂಡದ ಜೊತೆ ಒಳ್ಳೆy ಪ್ರಯತ್ನ ಮಾಡಿದ್ದೇವೆ, ಆಶೀರ್ವಾದ ಇರಲಿ ಎಂದು ನಟ ದಿಗಂತ್ ಹೇಳಿದರು.

ಸಮರ್ಥ್ ಬಿ. ಕಡಕೊಳ್ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಈ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ ಇದು ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರ. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಹೈಫನ್ ಪಿಕ್ಚರ್ಸ್ ಬ್ಯಾನರ್​​ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಈ ಸಿನಿಮಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net