ವೈದ್ಯರು ಜನರಿಕ್ ಔಷಧ ಬರೆಯುವುದು ಕಡ್ಡಾಯ, ತಪ್ಪಿದರೆ ದಂಡ: ರಾಷ್ಟ್ರೀಯ ವೈದ್ಯಕೀಯ ಆಯೋಗ

Doctor Generic
Published on: 

ನವದೆಹಲಿ: ಎಲ್ಲ ವೈದ್ಯರೂ ಜನರಿಕ್ ಔಷಧವನ್ನು ಬರೆದು ಶಿಫಾರಸು ಮಾಡುವುದು ಕಡ್ಡಾಯ. ತಪ್ಪಿದರೆ ಅಂಥ ವೈದ್ಯರಿಗೆ ದಂಡ ಕೂಡ ಬೀಳಲಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್​ಎಂಸಿ) ಇಂಥದ್ದೊಂದು ಸೂಚನೆಯನ್ನು ನೀಡಿದೆ.

ವೈದ್ಯರು ಜನರಿಕ್ ಔಷಧವನ್ನು ಬರೆಯಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಸೂಚನೆ ನೀಡುತ್ತಿರುವುದು ಇದೇ ಮೊದಲಲ್ಲದಿದ್ದರೂ ಇದೇ ಪ್ರಥಮ ಬಾರಿಗೆ ದಂಡ ವಿಧಿಸಲಿಕ್ಕೂ ಮುಂದಾಗಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ 'ರೆಗ್ಯುಲೇಷನ್ಸ್ ರಿಲೇಟಿಂಗ್ ಟು ಪ್ರೊಫೆಷನಲ್ ಕಂಡಕ್ಟ್ ಆಫ್ ರಿಜಿಸ್ಟರ್ಡ್ ಮೆಡಿಕಲ್ ಪ್ರ್ಯಾಕ್ಟಿಷಿನರ್ಸ್​' ಪ್ರಕಾರ ವೈದ್ಯರು ಜನರಿಕ್ ಔಷಧವನ್ನು ಬರೆದುಕೊಡುವುದಲ್ಲದೆ, ಬ್ರ್ಯಾಂಡೆಡ್ ಜನರಿಕ್ ಔಷಧವನ್ನು ಬರೆಯುವುದನ್ನು ತಪ್ಪಿಸಬೇಕು ಎಂದೂ ಸೂಚನೆ ನೀಡಲಾಗಿದೆ.
ಆಯೋಗದಿಂದ ಆ. 2ರಂದು ಈ ಸೂಚನೆ ಹೊರಬಿದ್ದಿದೆ.

ಭಾರತದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ಬ್ರ್ಯಾಂಡೆಡ್ ಔಷಧಗಳಿಗಿಂತ ಜನರಿಕ್ ಔಷಧ ಶೇ. 30ರಿಂದ 80ರಷ್ಟು ಕಡಿಮೆ ಬೆಲೆಯದ್ದಾಗಿದ್ದು, ವೈದ್ಯರು ಅಂಥ ಔಷಧಗಳನ್ನೇ ರೋಗಿಗಳಿಗೆ ಸೂಚಿಸಬೇಕು ಎಂದು ಆಯೋಗ ಹೇಳಿದೆ.

ವೈದ್ಯರು ಜನರಿಕ್ ಔಷಧವನ್ನು ಬರೆಯದಿದ್ದಲ್ಲಿ ಅವರಿಗೆ ದಂಡ ವಿಧಿಸಲಾಗುವುದು. ಅದಾಗ್ಯೂ ಪದೇಪದೆ ಉಲ್ಲಂಘಿಸಿದರೆ ಅಂಥವರ ಪರವಾನಗಿಯನ್ನು ಅಮಾನತಿನಲ್ಲಿ ಇಡಲಾಗುವುದು ಎಂದೂ ರಾಷ್ಟ್ರೀಯ ವೈದ್ಯಕೀಯ ಆಯೋಗ ಹೇಳಿದೆ.