

ತಮಿಳುನಾಡು: ಕಾಲಿವುಡ್ನ ಸೂಪರ್ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ 'ಜೈಲರ್' ಜಾಗತಿಕವಾಗಿ ಬಿಡುಗಡೆಗೊಂಡು ಬ್ಲಾಕ್ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿತು. ಜೈಲರ್ ಸಕ್ಸಸ್ ಬೆನ್ನಲ್ಲೇ ಹೆಚ್ಚು ಸಮಯ ವ್ಯರ್ಥ ಮಾಡದ ರಜನಿ, ಟಿ.ಜೆ. ಜ್ಞಾನವೇಲ್ ನಿರ್ದೇಶನದಲ್ಲಿ ಮೂಡಿಬರಲಿರುವ ತಮ್ಮ ಮುಂದಿನ ಸಿನಿಮಾ 'ತಲೈವರ್ 170' ಚಿತ್ರೀಕರಣದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ.
ಬ್ಯಾಕು ಟು ಬ್ಯಾಕು ಚಿತ್ರಗಳಲ್ಲಿ ನಟಿಸುತ್ತಿರುವ ತಲೈವಾ ಜನ್ಮದಿನ ಡಿಸೆಂಬರ್ 12 ರಂದು ಇರುವ ಹಿನ್ನೆಲೆ ಅಭಿಮಾನಿಗಳು ಭರ್ಜರಿಯಾಗಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಪ್ರತಿವರ್ಷ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸಂಭ್ರಮಿಸುವ ರಜನಿ ಅಭಿಮಾನಿಗಳಿಗೆ ಈ ಬಾರಿ ಡಬಲ್ ಧಮಾಕಾ ದೊರೆಯಲಿದೆ. ಈ ಸುದ್ದಿ ಕೇಳಿದ ಫ್ಯಾನ್ಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಕುತೂಹಲ ಹೊರಹಾಕಿದ್ದಾರೆ.
1995 ರಲ್ಲಿ ರಜನಿಕಾಂತ್ ಅಭಿನಯದ ಸೂಪರ್ ಹಿಟ್ 'ಮುತ್ತು' ಚಿತ್ರವನ್ನು ಚಿತ್ರತಂಡ ಇದೀಗ ಅಭಿಮಾನಿಗಳ ಮುಂದಿಡಲು ಸಜ್ಜಾಗಿದೆ. ಮುಂದಿನ ತಿಂಗಳು ರಜನಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಚಿತ್ರಮಂದಿರಗಳಲ್ಲಿ ಮುತ್ತು ಗ್ರ್ಯಾಂಡ್ ರೀ-ರಿಲೀಸ್ ಆಗಲಿದೆ. ಚಿತ್ರದ ಅಧಿಕೃತ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಇದು ಕೇವಲ ತಮಿಳು ಆವೃತ್ತಿಯಲ್ಲಿ ಬರಲಿದೆ ಎಂದು ಹೇಳಲಾಗಿದ್ದು, ತೆಲುಗು ಆವೃತ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.
ಇದರೊಟ್ಟಿಗೆ ರಜನಿಕಾಂತ್ ಅವರ ತೆಲುಗು ಅಭಿಮಾನಿಗಳಿಗೆ ಒಂದು ಮಸ್ತ್ ಸುದ್ದಿ ಲಭಿಸಿದೆ. ತಲೈವಾ ನಟನೆಯ ಮತ್ತೊಂದು ಸೂಪರ್ ಹಿಟ್ ಚಿತ್ರ 'ಶಿವಾಜಿ: ದಿ ಬಾಸ್' ಇದೀಗ ತೆಲುಗಿನಲ್ಲಿ ಡಿಸೆಂಬರ್ 9, 2023 ರಂದು ರೀ-ರಿಲೀಸ್ ಆಗಲು ಸಜ್ಜಾಗಿದೆ. ಸೂಪರ್ಸ್ಟಾರ್ ಜನ್ಮದಿನದ ವಾರದಲ್ಲೇ ಈ ಎರಡು ಮೆಗಾ ಸಿನಿಮಾ ಮತ್ತೊಮ್ಮೆ ತೆರೆಗೆ ಬರಲಿದೆ,(ಏಜೆನ್ಸೀಸ್).