

ಬೆಂಗಳೂರು: ಸ್ಯಾಂಡಲ್ವುಡ್ನ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅಭಿನಯದ, ದೀಪಕ್ ಅರಸ್ ನಿರ್ದೇಶನದ 'ಶುಗರ್ ಫ್ಯಾಕ್ಟರಿ' ಸಿನಿಮಾ ಶೀಘ್ರವೇ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಈ ಮಧ್ಯೆ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದ್ದು, ಬಾಲಿವುಡ್ನ ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಈ ಹಾಡನ್ನು ಹಾಡಿದ್ದಾರೆ.
ಭಾವನೆಗಳನ್ನು ಬಿಂಬಿಸುವ 'ಹಣೆಬರಹ' ಸಾಂಗ್ ಅನ್ನು ಅರ್ಮಾನ್ ಮಲ್ಲಿಕ್ ಹಾಡಿರುವುದು ಮತ್ತಷ್ಟು ವಿಶೇಷ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ 'ಶುಗರ್ ಫ್ಯಾಕ್ಟರಿ' ಇದೀಗ ಮತ್ತೊಂದು ಹಾಡಿನ ಮುಖೇನ ಸಿನಿಪ್ರಿಯರ ಗಮನಸೆಳೆಯುತ್ತಿದೆ.
ರಾಘವೇಂದ್ರ ಕಾಮತ್ ಬರೆದಿರುವ 'ಹಣೆಬರಹ' ಹಾಡಿಗೆ ಕಬೀರ್ ರಫಿ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆ ಪಡೆಯುತ್ತಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಸಿನಿಪ್ರೇಕ್ಷಕರನ್ನು ಸೆಳೆದಿದೆ. ಈ ಸಿನಿಮಾ ಇದೇ ನವೆಂಬರ್ 24 ರಂದು ತೆರೆಗೆ ಬರಲಿದೆ. ಡಾರ್ಲಿಂಗ್ ಕೃಷ್ಣ ಈವರೆಗೂ ಅಭಿನಯಿಸಿರುವ ಎಲ್ಲಾ ಚಿತ್ರಗಳಿಗಿಂತ "ಶುಗರ್ ಫ್ಯಾಕ್ಟರಿ" ಅಪಾರ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರ ಎನ್ನಲಾಗುತ್ತಿದೆ.
ಆರ್. ಗಿರೀಶ್ ನಿರ್ಮಿಸಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣಗೆ ನಾಯಕಿಯರಾಗಿ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.