

ಉಡುಪಿ: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಆಯುರ್ವೇದ ಚಿಕಿತ್ಸೆಯೂ ಸೇರ್ಪಡೆಯಾದರೆ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ರಾಜ್ಯಸಭಾ ಸದಸ್ಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಭಾನುವಾರ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ 3 ಆಯುರ್ವೇದ ಆಸ್ಪತ್ರೆಗಳಲ್ಲೂ ಹೆಚ್ಚಿನ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ವೈದ್ಯಕಿಯ ಸೌಲಭ್ಯವನ್ನು ನೀಡಿ ಆರೋಗ್ಯ ಸುಧಾರಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಪ್ರತಿದಿನ 6 ರಿಂದ 7 ಸಾವಿರ ಜನರು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಶೇ. 50ರಷ್ಟು ಮಂದಿ ಹೊಸದಾಗಿ ದಾಖಲಾಗುವುವವರು. ಆಯುರ್ವೇದ ಚಿಕಿತ್ಸೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುತ್ತಿದೆ. ವೈದ್ಯರಿಂದ ಉತ್ತಮ ಸೇವೆ ನಿರೀಸುತ್ತಿದ್ದು, ಚಿಕಿತ್ಸಾ ಗುಣಮಟ್ಟದ ಇನ್ನಷ್ಟು ಸುಧಾರಣೆಯಾಗಬೇಕು ಎಂದು ಹೇಳಿದರು.
ಹಾಸನ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸನ್ನ ಎನ್. ರಾವ್, ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ನಾಗರಾಜ್ ಎಸ್., ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಭರತೇಶ್ ಎ., ಉಪಾಧ್ಯಕ್ಷ ಡಾ. ನಾರಾಯಣ ಟಿ. ಅಂಚನ್, ಜೊತೆ ಕಾರ್ಯದರ್ಶಿ ಡಾ. ವ್ಯಾಸರಾಜ ತಂತ್ರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಳ್ಳಾರಿಯ ಶ್ರೀನಿವಾಸ ಕ್ಲಿನಿಕ್ನ ಡಾ. ಗೋಪಿಕೃಷ್ಣ ಅವರು ಕ್ಲಿನಿಕಲ್ ಎಪ್ಲಿಕೇಶನ್ ಆಫ್ ರಸೌಷಧೀಸ್ ಇನ್ ಜನರಲ್ ಪ್ರಾಕ್ಟೀಸ್ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಸಿಕೊಟ್ಟರು. ರೋಗನಿದಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ವಿ. ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಸಹಾಯಧನವಿತ್ತವರನ್ನು ಗೌರವಿಸಲಾಯಿತು. ಹಳೆವಿದ್ಯಾರ್ಥಿಗಳಿಗೆ ವಿಶೇಷ ಸವಲತ್ತುಗಳನ್ನೊಳಗೊಂಡ ಕಾರ್ಡನ್ನು ಬಿಡುಗಡೆಗೊಳಿಸಲಾಯಿತು. ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ಸಂಘದ ಕಾರ್ಯದರ್ಶಿ ಡಾ. ಮೊಹಮ್ಮದ್ ಇಕ್ಬಾಲ್ ವಂದಿಸಿದರು. ಸಹಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ. ಶುಭಾ ಪಿ.ಯು. ನಿರೂಪಿಸಿದರು.