ಬೆಂಗಳೂರು-ಮೈಸೂರು ದಶಪಥ: 2ನೇ ಟೋಲ್​ನಲ್ಲಿ ಶುಲ್ಕ ಸಂಗ್ರಹ ತಡೆಗೆ ಶಾಸಕರ ಮನವಿ

Bangalore-Mysore-Expressway
Published on

ಬೆಂಗಳೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ನಡುವೆ ಇರುವ ಶ್ರೀರಂಗಪಟ್ಟಣ ತಾಲ್ಲೂಕು ಗಣಂಗೂರು 2ನೇ ಟೋಲ್​ನಲ್ಲಿ ಶುಲ್ಕ ಸಂಗ್ರಹಿಸುವುದನ್ನು ಮತ್ತು ಸರ್ವಿಸ್ ರಸ್ತೆ ಇನ್ನಿತರ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ಮಾಡದಂತೆ ತಡೆ ನೀಡಲು ಮನವಿ ಮಾಡಿಕೊಳ್ಳಲಾಗಿದೆ.

ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಜೊತೆಯಾಗಿ ಲೋಕೋಪಯೋಗಿ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಈ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯು ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗೊಂಡಿದೆ. ಇದರಿಂದ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಶೀಘ್ರ ಸಂಚಾರಕ್ಕೆ ಅನುಕೂಲವಾಗಿದೆ ಎಂಬ ಅಂಶ ಬಿಟ್ಟರೆ ಇದು ಜನರಿಗೆ ನಿಜಕ್ಕೂ ಜೇಬು ಸುಡುವ ರಹದಾರಿಯಾಗಿದೆ. ಈ ಮಾರ್ಗದಲ್ಲಿ ಜನರು ಟೋಲ್ ಕಟ್ಟಿ ಕಟ್ಟಿ ಬಸವಳಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈಗ ಇದ್ದದ್ದು ಸಾಲದೆಂಬಂತೆ ಶ್ರೀರಂಗಪಟ್ಟಣ ತಾಲೂಕು ಗಣಂಗೂರು 2ನೇ ಟೋಲ್‌ನಲ್ಲಿ ಸಹ ಇದೇ ಜುಲೈ 1ರಿಂದ ಟೋಲ್ ಸಂಗ್ರಹಕ್ಕೆ ಮುಂದಾಗಲಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ.

ಈ ರೀತಿಯಲ್ಲಿ ಜನರಿಗೆ ಹೊರೆಯಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಅಲ್ಲದೆ, ಬೆಂಗಳೂರಿನಿಂದ ಮೈಸೂರಿಗೆ ಸ್ವಂತ ವಾಹನದಲ್ಲಿ ಹೋಗಿ ಬರಲು ಟೋಲ್ ಶುಲ್ಕವಾಗಿಯೇ 500 ರೂಪಾಯಿ ಕಟ್ಟಬೇಕೆಂದರೆ ನಿಜಕ್ಕೂ ಪ್ರಯಾಣ ಎಂಬುದು ದುಸ್ತರವಾಗಲಿದೆ ಎಂದು ಇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಆರಂಭಿಕ ಹಂತದಲ್ಲಿ ಟೋಲ್ ಶುಲ್ಕ ಬೀಳುತ್ತಿದೆ. ಇದನ್ನು ಜೂನ್ 1ರಿಂದಲೇ ಜಾರಿಗೆ ಬರುವಂತೆ ಶೇ.22ರಷ್ಟು ಹೆಚ್ಚಳ ಮಾಡಿ ಆದೇಶಿಸಲಾಗಿತ್ತು. ಮೊದಲೇ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಇದೇ ಹೊರೆ ಅಂದುಕೊಳ್ಳುತ್ತಿರಬೇಕಾದರೆ ಈಗ ಶ್ರೀರಂಗಪಟ್ಟಣದಲ್ಲೂ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತಿದೆ ಎಂದಿದ್ದಾರೆ.

ಇಲ್ಲಿ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿಲ್ಲ. ಆಗಬೇಕಿರುವ ಕಾಮಗಾರಿಗಳು ಹತ್ತಾರು ಇವೆ. ಅವುಗಳು ಇನ್ನೂ ಕುಂಟುತ್ತ ಸಾಗಿವೆ. ಕೇಳಿದರೆ ಕುಂಟು ನೆಪಗಳನ್ನು ಹೇಳಲಾಗುತ್ತದೆ. ಆದರೆ, ಜನರಿಂದ ದುಡ್ಡು ಪಡೆಯಲು ಮಾತ್ರ ಇದಾವುದೂ ಲೆಕ್ಕಕ್ಕೇ ಬಾರದು ಎಂದರೆ ಹೇಗೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇನ್ನೊಂದೆಡೆ ನೈಸ್ ರೋಡ್​​ನಲ್ಲೂ ಟೋಲ್ ಹೆಚ್ಚಿಸಲಾಗಿದೆ.

ಹೊಸ ದರ
ಹಳೇ ದರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net