

ಕೇರಳ: ಹೋಟೆಲ್ ಮಾಲೀಕರೊಬ್ಬರ ದೇಹದ ಭಾಗಗಳು ಟ್ರಾಲಿ ಬ್ಯಾಗ್‌ನಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಭೀಕರ ಘಟನೆ ನಡೆದಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಘಾಟ್ ರಸ್ತೆ ಬಳಿ ಈ ಬ್ಯಾಗ್ ದೊರೆತಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತನನ್ನು ಸಿದ್ದಿಕ್ ಎಂದು ಗುರುತಿಸಲಾಗಿದ್ದು, ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದ. ಈ ಕುರಿತು ಆತನ ಪುತ್ರನಿಂದ ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು.
ಮೇ 18 ಮತ್ತು 19ರ ನಡುವೆ ಸಿದ್ದಿಕ್ ಕೊಲೆ ನಡೆದಿದ್ದು, ಕೊಲೆಗೈದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ರೈಲ್ವೆ ರಕ್ಷಣಾ ಪಡೆಯ ಸಹಾಯದಿಂದ ತಮಿಳುನಾಡಿನ ಚೆನ್ನೈನಲ್ಲಿ ಆರೋಪಿಗಳನ್ನು ಸೆರೆಹಿಡಿಯಲಾಗಿದ್ದು, ಸಿದ್ದಿಕ್ ಅವರ ಮಾಜಿ ಉದ್ಯೋಗಿ ಸೇರಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)