ಸರ್ಕಾರಿ ಶಾಲೆಗಳಿಗೆ ಶುಕ್ರದೆಸೆ: ಈ ಸಾಲಿನ ಹದಿನೈದೇ ದಿನದಲ್ಲಿ 16,52,613 ಮಕ್ಕಳು ಸೇರ್ಪಡೆ..

Front lead
ಖಾಸಗಿ ಶಾಲೆಗಳನ್ನೂ ಮೀರಿಸುವಷ್ಟು ಹೈಟೆಕ್ ಆಗಿರುವ ಬೆಂಗಳೂರಿನ ಮಹದೇವಪುರದ ಸರ್ಕಾರಿ ಶಾಲೆ.
Published on

| ದೇವರಾಜ್ ಕನಕಪುರ ಬೆಂಗಳೂರು

ಕರೊನಾ ಮಹಾಮಾರಿಯ ಕಾಲಘಟ್ಟದಲ್ಲಿ ಆರ್ಥಿಕ ಹೊರೆ ಸಹಿತ ನಾನಾ ಕಾರಣಗಳಿಗೆ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ವಲಸೆ ಗಣನೀಯವಾಗಿ ಹೆಚ್ಚಿದೆ. ಈ ಸಾಲಿನ ಶಾಲಾ ದಾಖಲಾತಿ ಆರಂಭವಾದ ಹದಿನೈದು ದಿನಗಳಲ್ಲೇ ಬರೋಬ್ಬರಿ 16,52,613 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದಿದ್ದು, ಇವರಲ್ಲಿ ಬಹುಪಾಲು ಮಕ್ಕಳು ಖಾಸಗಿ ಶಾಲೆಗಳಿಂದ ವಲಸೆ ಬಂದವರಾಗಿದ್ದಾರೆ.

ಕರೊನಾ ಸಂಕಷ್ಟದ ನಡುವೆಯೂ ಖಾಸಗಿ ಶಾಲೆಗಳು ವಿವಿಧ ಕಾರಣಗಳನ್ನು ಮುಂದೊಡ್ಡಿ ಶುಲ್ಕ ತಗ್ಗಿಸುತ್ತಿಲ್ಲ. ಇದರಿಂದ ಕಂಗಾಲಾಗಿರುವ ಪಾಲಕರು ಸರ್ಕಾರಿ ಶಾಲೆಗಳಿಗೆ ಮೊರೆ ಹೋಗುತ್ತಿದ್ದಾರೆ. ಸರ್ಕಾರ ಕೂಡ ಖಾಸಗಿ ಶಾಲೆಗಳ ಶುಲ್ಕ ವಿಚಾರದಲ್ಲಿ ಯಾವುದೇ ಸ್ಪಷ್ಟತೆ ನೀಡದಿರುವುದು ಮಕ್ಕಳ ವಲಸೆಗೆ ಕಾರಣವಾಗುತ್ತಿದೆ.

ಶಿಕ್ಷಣ ಇಲಾಖೆ 2021-22ನೇ ಸಾಲಿನ ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯನ್ನು ಜೂ.15ರಿಂದ ಆರಂಭಿಸಿದೆ. ಆ ಪ್ರಕಾರವಾಗಿ ಎಲ್ಲ ಮಾದರಿಯ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ದಾಖಲಾತಿಗೆ ಇನ್ನೂ ಸಮಯವಿದೆ. ಈಗಿನ 15 ದಿನಗಳ ದತ್ತಾಂಶದ ಪ್ರಕಾರ, ರಾಜ್ಯದ ಪ್ರತಿ ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ 20 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಸರಾಸರಿ 34.4 ಮಕ್ಕಳು ದಾಖಲಾಗಿದ್ದಾರೆ. ಕಳೆದ ವರ್ಷ ಖಾಸಗಿಯನ್ನು ತೊರೆದುಬಂದವರು ಉಳಿದುಕೊಳ್ಳುವುದರ ಜತೆಗೆ ಹೊಸದಾಗಿಯೂ ವಲಸೆ ಮುಂದುವರಿದಿರು ವುದನ್ನು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಶೇ.38 ದಾಖಲು: ರಾಜ್ಯದಲ್ಲಿ 48,006 ಸರ್ಕಾರಿ ಶಾಲೆಗಳಿದ್ದು, 2020-21ರಲ್ಲಿ ಈ ಶಾಲೆಗಳಿಗೆ ಒಟ್ಟು 42,91,812 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 2021-22ನೇ ಸಾಲಿನಲ್ಲಿ ಇಲ್ಲಿಯವರೆಗೆ 16,52,613 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅಂದರೆ ಕಳೆದ ವರ್ಷದ ಹೋಲಿಕೆಯಲ್ಲಿ ಇಲ್ಲಿಯವರೆಗೆ ಶೇ.38.5 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇನ್ನು 22,065 ಖಾಸಗಿ ಶಾಲೆಗಳಿದ್ದು, ಕಳೆದ ವರ್ಷ 45,34,201 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ವರ್ಷ ಸದ್ಯ 4,48,699 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅಂದರೆ ಕಳೆದ ವರ್ಷದ ದಾಖಲಾತಿ ಹೋಲಿಕೆಯಲ್ಲಿ ಕೇವಲ ಶೇ.9.89 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ರವೇಶ ದಾಖಲಾತಿಗೆ ಇನ್ನೂ ಒಂದು ತಿಂಗಳಿದ್ದು, ಮತ್ತಷ್ಟು ದಾಖಲಾತಿ ನಡೆಯಲಿದೆ.

3ನೇ ಅಲೆ ಭಯ: ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಕರಣ ಕಡಿಮೆಯಾಗಿದ್ದರೂ, 3ನೇ ಅಲೆಯ ಭಯ ಇದೆ. ಅದರಲ್ಲೂ ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಪಾಲಕರು ತಕ್ಷಣಕ್ಕೆ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ, ಶುಲ್ಕದ ವಿಚಾರದಲ್ಲೂ ಗೊಂದಲ ಇದೆ. ಈ ವಿಚಾರ ಇನ್ನು ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದ್ದು, ಅಂತಿಮ ತೀರ್ಪು ಹೊರಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ಪಾಲಕರು ಒಮ್ಮೆ ಸರ್ಕಾರ ಶುಲ್ಕ ನಿಗದಿ ಮಾಡಿದ ಮೇಲೆ ದಾಖಲು ಮಾಡೋಣ ಎಂಬ ಆಲೋಚನೆಯಲ್ಲಿದ್ದಾರೆ. ಇದರಿಂದ ಪ್ರವೇಶ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ.

ಶಾಲೆಗಳ ದತ್ತು ಗುಣಮಟ್ಟ ಹೆಚ್ಚಳ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆ ದಾಖಲಾತಿ ಹೆಚ್ಚಾಗಿರುವುದಕ್ಕೂ ಭಿನ್ನ ಕಾರಣಗಳಿವೆ. ಸರ್ಕಾರದ ಮನವಿಗೆ ಸ್ಪಂದಿಸಿ ಅನೇಕ ಸೆಲೆಬ್ರಿಟಿಗಳು, ಗಣ್ಯರು, ರಾಜಕಾರಣಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುತ್ತಿದ್ದು, ಒಟ್ಟಾರೆಯಾಗಿ ಶಾಲೆಗಳಲ್ಲಿ ಮೂಲಸೌಕರ್ಯ, ಗುಣಮಟ್ಟ ಹೆಚ್ಚುತ್ತಿದೆ. ಇನ್ನೊಂದೆಡೆ ಕರೊನಾ ಸಂಕಷ್ಟದಿಂದ ಹಲವು ಖಾಸಗಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿದೆ. ಹೀಗಾಗಿ ಆ ಶಾಲೆಗಳ ಮಕ್ಕಳು ಅನಿವಾರ್ಯವಾಗಿ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.

ಇಂದಿನಿಂದಲೇ ಆನ್​ಲೈನ್ ಕ್ಲಾಸ್: ಗುರುವಾರದಿಂದ 2021-22ನೇ ಸಾಲಿನ ಶೈಕ್ಷಣಿಕ ತರಗತಿಗಳು ಅಧಿಕೃತವಾಗಿ ಆರಂಭವಾಗಲಿವೆ. ಸದ್ಯ ಭೌತಿಕ ತರಗತಿಗಳ ಆರಂಭಕ್ಕೆ ಅವಕಾಶ ಇಲ್ಲದೆ ಇರುವುದರಿಂದ ಆನ್​ಲೈನ್ ತರಗತಿಗಳಷ್ಟೇ ಆರಂಭವಾಗಲಿದೆ.

27ರಿಂದ ಶಿಕ್ಷಕರ ವರ್ಗ: 2020-21ನೇ ಸಾಲಿನ ಶಿಕ್ಷಕರ ವರ್ಗಾ ವಣೆಗೆ ಬುಧವಾರ ಚಾಲನೆ ಸಿಕ್ಕಿದೆ. 27ರಂದು ಪ್ರಕ್ರಿಯೆ ಆರಂಭವಾಗಲಿದೆ.

ಬಹುತೇಕ ಪಾಲಕರು ಕಳೆದ ವರ್ಷದ ಶುಲ್ಕವನ್ನೇ ಪಾವತಿಸಿಲ್ಲ. ಈ ವರ್ಷ ಕೂಡ ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಮೊದಲು ಪ್ರವೇಶ ಮತ್ತು ಹಾಜರಾತಿಯನ್ನು ಕಡ್ಡಾಯ ಮಾಡಬೇಕು.

| ಡಿ.ಶಶಿಕುಮಾರ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಖಾಸಗಿ ಶಾಲೆ ಆಡಳಿತ ಮಂಡಳಿಗಳ ಒಕ್ಕೂಟ

ಗ್ರಾಮೀಣ ಭಾಗದಲ್ಲಿರುವ ಖಾಸಗಿ ಶಾಲೆಗಳು ಕರೊನಾದಿಂದಾಗಿ ಮುಚ್ಚುವ ಪರಿಸ್ಥಿತಿ ತಲುಪಿವೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಶೇ.10-15 ಹೆಚ್ಚಳವಾಗುವ ಸಾಧ್ಯತೆ ಇದೆ.

| ಎಂ. ಪ್ರಸನ್ನ ಕುಮಾರ್ ನಿರ್ದೇಶಕರು(ಪ್ರಾಥಮಿಕ ಶಿಕ್ಷಣ), ಸಾರ್ವಜನಿಕ ಶಿಕ್ಷಣ ಇಲಾಖೆ

ಜಿಲ್ಲೆಗಳಲ್ಲೂ ಸರ್ಕಾರಿ ಶಾಲೆ ಟಾಪ್

ಹಾವೇರಿ: ಕಳೆದ ವರ್ಷ 5 ಸಾವಿರ ಖಾಸಗಿ ಶಾಲೆ ಮಕ್ಕಳು ಶಾಲೆಗಳಿಗೆ ಸೇರಿದ್ದರು. ಸರ್ಕಾರಿ ಶಾಲೆಯಲ್ಲಿದ್ದ 2.72 ಲಕ್ಷ ಮಕ್ಕಳ ಸಂಖ್ಯೆ 2.77ಕ್ಕೆ ಏರಿಯಾಗಿತ್ತು. ಈ ಬಾರಿ ಜೂ. 26ಕ್ಕೆ ಕೊನೆಗೊಂಡಂತೆ ಹಿಂದಿನ ಸರಾಸರಿ ಪ್ರವೇಶಕ್ಕೆ ಹೋಲಿಸಿದಾಗ ಶೇ. 30 ಮಕ್ಕಳ ಪ್ರವೇಶಾತಿ ಆಗಿದೆ.

ಮಂಡ್ಯ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ನಾಲ್ಕು ಸಾವಿರದಷ್ಟು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಬಂದು ದಾಖಲಾತಿ ಪಡೆದಿದ್ದಾರೆ.

ಮೈಸೂರು: ಕಳೆದ ವರ್ಷ ಖಾಸಗಿ ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪಾಲಕರು ಸರ್ಕಾರಿ ಶಾಲೆಗಳಿಗೆ ಸೇರ್ಪಡೆ ಮಾಡಿದ್ದರು. ಈ ವರ್ಷವೂ ದಾಖಲಾತಿ ಹೆಚ್ಚುವ ನಿರೀಕ್ಷೆ ಇದೆ.

ದಾವಣಗೆರೆ: ಕಳೆದ ವರ್ಷ ಜಿಲ್ಲೆಯಲ್ಲಿ 3 ಸಾವಿರ ಮಕ್ಕಳು ಸರ್ಕಾರಿ ಶಾಲೆಯತ್ತ ವಲಸೆ ಬಂದಿದ್ದರು. ಈ ಬಾರಿ 4 ರಿಂದ 5 ಸಾವಿರ ಸಂಖ್ಯೆಯಷ್ಟು ಮಕ್ಕಳು ಬರುವ ನಿರೀಕ್ಷೆ ಇದೆ.

ಬೀದರ್/ಕಲಬುರಗಿ/ಯಾದಗಿರಿ: ಶೈಕ್ಷಣಿಕ ವರ್ಷ ಆರಂಭದ ಬಗ್ಗೆ ಖಚಿತತೆ ಇಲ್ಲವಾಗಿದ್ದರಿಂದ ಬಹುತೇಕ ಮಕ್ಕಳು, ಪಾಲಕರು ಅಡ್ಮಿಷನ್ ಮಾಡಿಸಲು ಮುಂದೆ ಬರುತ್ತಿಲ್ಲ. ಖಾಸಗಿ ಶಾಲೆಗಳವರು ಶುಲ್ಕವನ್ನು 4-5 ಕಂತು ರೂಪದಲ್ಲಿ ಕಟ್ಟುವಂತೆ ಅವಕಾಶ ನೀಡಿದರೂ ಪ್ರವೇಶಾತಿಯಲ್ಲಿ ವೇಗ ಕಾಣುತ್ತಿಲ್ಲ.

ಗದಗ: ಕಳೆದ ವರ್ಷ ಸರ್ಕಾರಿ ಶಾಲೆಗಳ ದಾಖಲಾತಿ ಸಂಖ್ಯೆ 2 ಸಾವಿರದಷ್ಟು ಹೆಚ್ಚಾಗಿತ್ತು. ಈ ಸಲವೂ ಹೆಚ್ಚಾಗುವ ವಿಶ್ವಾಸವಿದೆ ಎನ್ನುತ್ತಾರೆ ಅಧಿಕಾರಿಗಳು.

ಬಳ್ಳಾರಿ/ರಾಯಚೂರು/ಕೊಪ್ಪಳ: ಶೈಕ್ಷಣಿಕ ಚಟುವಟಿಕೆ ಆರಂಭವಾದರೂ ವೇಗ ಪಡೆದಿಲ್ಲ. ಖಾಸಗಿ ಶಾಲೆಗಳಿಗೂ ಪಾಲಕರು ಶುಲ್ಕ ಕಟ್ಟುತ್ತಿಲ್ಲ. ಖಾಸಗಿ ಶಾಲೆಗಳಲ್ಲಿನ ಶುಲ್ಕವನ್ನು ಸರ್ಕಾರ ಕಳೆದ ವರ್ಷದಂತೆ ಕಡಿತಗೊಳಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಪಾಲಕರು.

ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಈ ವರ್ಷ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಗೆ 8ರಿಂದ 10 ಸಾವಿರಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ. ಖಾಸಗಿ ಶಾಲೆಗಳಿಂದ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಈಗ ಪಾಲಕರು ಪರದಾಡುತ್ತಿದ್ದಾರೆ.

ಶಿವಮೊಗ್ಗ: ಕಳೆದ ವರ್ಷ ಲಾಕ್​ಡೌನ್ ಬಳಿಕ 2 ಸಾವಿರ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆ ಪ್ರವೇಶ ಪಡೆದಿದ್ದರು. ಈ ವರ್ಷವೂ ಹೆಚ್ಚಲಿದೆ.

ಚಿಕ್ಕಮಗಳೂರು: ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿ 16 ಸಾವಿರ ವಿದ್ಯಾರ್ಥಿಗಳು ಸೇರಿದ್ದು. ಸರ್ಕಾರಿ ಶಾಲೆಯ 1, 6 ಮತ್ತು 8ನೇ ತರಗತಿಗೆ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಸದಾಗಿ ನೋಂದಣಿಯಾಗಿದ್ದಾರೆ.

ಶಿರಸಿ: ಕಳೆದ ವರ್ಷ 158 ಮಕ್ಕಳು ಖಾಸಗಿ ಶಾಲೆಗಳಿಂದ ಮುಕ್ತಿ ಪಡೆದು ಸರ್ಕಾರಿ ಶಾಲೆಗೆ ಸೇರಿದ್ದರು. ಈ ಬಾರಿ ಈ ಸಂಖ್ಯೆ 300 ರಷ್ಟಿದೆ.

ಕಾರವಾರ: ಕಳೆದ ವರ್ಷ 890 ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗೆ ಸೇರಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಈ ಸಂಖ್ಯೆ ಅಂದಾಜು 2200ಕ್ಕೆ ಹೆಚ್ಚಳವಾಗಿದೆ.

ಮಂಗಳೂರು: ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಇರುವ ಸರ್ಕಾರಿ ಶಾಲೆಗಳಲ್ಲಿ ಈ ವರ್ಷವೂ ಅಡ್ಮಿಶನ್ ಜೋರಾಗಿದೆ. ದ.ಕ.ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಈವರೆಗೆ ಶೇ.16 ಅಷ್ಟೇ ಅಡ್ಮಿಶನ್ ಆಗಿದೆ.

ಕೋಲಾರ: ಖಾಸಗಿ ಶಾಲೆಗಳಿಂದ 2ನೇ ತರಗತಿ ಮೇಲ್ಪಟ್ಟ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರ್ಪಡೆ ಆಗುತ್ತಿದ್ದಾರೆ. ಕೋಲಾರ ತಾಲೂಕು ಒಂದರಲ್ಲೇ ಖಾಸಗಿ ಶಾಲೆಯ 40ಕ್ಕೂ ಹೆಚ್ಚು ಮಕ್ಕಳು ದಾಖಲಾತಿಗೆ ಮುಂದೆ ಬಂದಿದ್ದಾರೆ.

ತುಮಕೂರು: ಸರ್ಕಾರಿ ಶಾಲೆಗಳಲ್ಲಿ ಶೇ.26 ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ.

ರಾಮನಗರ: ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಒಟ್ಟಾರೆ 142143 ಮಕ್ಕಳ ದಾಖಲಾತಿ ಗುರಿ ಹೊಂದಿದ್ದು ಶನಿವಾರದ ಅಂತ್ಯಕ್ಕೆ 30300 ಮಕ್ಕಳು ದಾಖಲಾಗಿದ್ದರು. ಶೇ.21.03 ಪ್ರಗತಿ ಆಗಿದೆ.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶೇ.28 ದಾಖಲಾತಿ ಆಗಿದೆ.

ಬೆಂ.ಗ್ರಾಮಾಂತರ: ಸರ್ಕಾರಿ ಶಾಲೆಗಳಿಗೆ ಶೇ.22 ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ.

10 ದಿನ 172 ಮಕ್ಕಳ ಸೇರ್ಪಡೆ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರಗೌಡನ ಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಮಕ್ಕಳನ್ನು ದಾಖಲಿಸಲು ಪಾಲಕರು ಮುಗಿಬೀಳುತ್ತಿದ್ದಾರೆ. ಕೆಲವರಂತೂ ಸೀಟ್​ಗಾಗಿ ಶಿಫಾರಸು ಮಾಡಿಸುತ್ತಿದ್ದಾರೆ! ಕೇವಲ 10 ದಿನದಲ್ಲಿ 172 ಮಕ್ಕಳು ಈ ಶಾಲೆಗೆ ಸೇರಿರುವುದು ಇದರ ಖ್ಯಾತಿಗೆ ನಿದರ್ಶನ. ಬೆಂಗಳೂರು, ಮೈಸೂರು ಸೇರಿದಂತೆ ಜಿಲ್ಲೆಯೊಳಗೆ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳನ್ನು ಬಿಡಿಸಿರುವ ಪಾಲಕರು, ಈ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 500 ದಾಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net