

ವಾಹನದ ಚಾಸ್ಸಿ ನಂಬರ್ ಹಾಗೂ ಇಂಜಿನ್ ನಂಬರ್ಗಳನ್ನು ಅಕ್ರಮವಾಗಿ ತಿದ್ದಿ (ಟ್ಯಾಂಪರ್) ಒಂದೇ ರಿಜಿಸ್ಟ್ರೇಷನ್ ನಂಬರ್ನಲ್ಲಿ ಹಲವು ವಾಹನಗಳು ಸಂಚರಿಸುವ ಮುಖೇನ ಸರ್ಕಾರಕ್ಕೆ ರಸ್ತೆ ತೆರಿಗೆ ವಂಚಿಸುತ್ತಿರುವ ದಂಧೆ ಬೆಳಕಿಗೆ ಬಂದಿರುವುದು ತಾಜಾ ವಿದ್ಯಮಾನ. ಬೆಂಗಳೂರಿನ ಯಶವಂತಪುರ ಆರ್ಟಿಒ ಅಧಿಕಾರಿಗಳು ಮಾರ್ಚ್ 3ರಂದು ಗೊರಗುಂಟೆಪಾಳ್ಯ ಸಮೀಪ ಜಪ್ತಿ ಮಾಡಿರುವ ಬಸ್ ಪರಿಶೀಲನೆಯ ವೇಳೆ ಚಾಸ್ಸಿ ನಂಬರ್ ದಂಧೆ ಬೆಳಕಿಗೆ ಬಂದಿದೆ. ಪ್ರಕರಣವೀಗ ಹೈಕೋರ್ಟ್ ಅಂಗಳ ತಲುಪಿದೆ.
ಸಮಾಜವು ಸುವ್ಯವಸ್ಥಿತವಾಗಿ ಸಾಗಬೇಕೆಂದೇ ನಿಯಮ, ಕಾನೂನು ರೂಪಿತವಾಗಿವೆ. ಈ ನಿಟ್ಟಿನಲ್ಲಿ ಕ್ರಮಿಸುವ ಸುಧಾರಣೆಯ ಪಯಣವು ದೀರ್ಘವಾದದ್ದು. ಅಪಸವ್ಯಗಳು ಕಂಡುಬಂದಾಗ, ದುರ್ಬಳಕೆ ಅಥವಾ ಇತರ ಪ್ರಮಾದಗಳು ನುಸುಳಿದಾಗ ಮತ್ತಷ್ಟು ಸುಧಾರಣೆಯ ಬಲದೊಂದಿಗೆ ನಿಯಮಗಳು ರೂಪುಗೊಳ್ಳುತ್ತವೆ. ಕೆಲವೊಮ್ಮೆ ಅನುಷ್ಠಾನದ ಹಾದಿಯಲ್ಲಿ ಎಡವುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ತೀವ್ರ ಆತಂಕ ಮೂಡಿಸಿರುವ ಸಂಗತಿ ಎಂದರೆ ರಾಜಾರೋಷವಾಗಿ ಕಾನೂನನ್ನು, ನಿಯಮಗಳನ್ನು ಉಲ್ಲಂಘಿಸುವ ಪ್ರವೃತ್ತಿ ಹೆಚ್ಚುತ್ತಿರುವುದು. ಇದು ಯಾವುದೋ ಕೆಲ ಇಲಾಖೆಗಳು ಅಥವಾ ಕ್ಷೇತ್ರಗಳಿಗೆ ಮಾತ್ರ ಸಂಬಂಧಿಸದ್ದಲ್ಲ. ಸರ್ವ ವ್ಯಾಪಿಯಾಗುತ್ತಿರುವ ಈ ಸಮಸ್ಯೆಗೆ ಸೂಕ್ತ ಮದ್ದನ್ನು ಅರೆಯಬೇಕಿದೆ. ಇಂಥ ಮೋಸ, ವಂಚನೆಯ ಘಟನೆಗಳು ಸಮಾಜದ ಹಿತಕ್ಕೆ, ಸರ್ಕಾರದ ಸುಧಾರಣೆಯ ಆಶಯಗಳಿಗೆ ಮಾರಕ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ, ಈ ಪ್ರಕರಣಗಳನ್ನು ಪ್ರಭುತ್ವ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯ. ಮತ್ತು ನಿಯಮವನ್ನು ಉಲ್ಲಂಘಿಸಿ ಬೇಕಾಬಿಟ್ಟಿ ವರ್ತನೆ ತೋರಿದ್ದಲ್ಲಿ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಬೇಕಿದೆ. ಇಲ್ಲವಾದಲ್ಲಿ ಅಕ್ರಮ ಮತ್ತು ವಂಚನೆಯ ಪ್ರಕರಣಗಳಿಗೆ ಕಡಿವಾಣವೇ ಇಲ್ಲದಂತಾಗುತ್ತದೆ. ಅಂಥ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಗುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಅವಶ್ಯ.
ಸಿಂಗಲ್ ಟ್ಯಾಕ್ಸ್, ಸಿಂಗಲ್ ರಿಜಿಸ್ಟ್ರೇಷನ್, ಸಿಂಗಲ್ ಇನ್ಸುರೆನ್ಸ್ನಲ್ಲಿ ಹಲವು ವಾಹನಗಳನ್ನು ಚಲಾಯಿಸುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಅಲ್ಲದೆ, ದೊಡ್ಡಮಟ್ಟದಲ್ಲಿ ನಡೆಯುತ್ತಿರುವ ಈ ದಂಧೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಕೋಟ್ಯಂತರ ರೂಪಾಯಿ ರಸ್ತೆ ತೆರಿಗೆ ಸೋರಿಕೆಯಾಗುತ್ತಿರುವುದು ಮತ್ತೊಮ್ಮೆ ದೃಢಪಟ್ಟಿರುವುದು ಗಮನಾರ್ಹ. ರಿಜಿಸ್ಟ್ರೇಷನ್ ಸಂಖ್ಯೆ, ಚಾಸ್ಸಿ ಸಂಖ್ಯೆ, ಇಂಜಿನ್ ಸಂಖ್ಯೆ ಎಲ್ಲವೂ ಅದಲು ಬದಲು ಮಾಡಲಾಗಿದ್ದು, ಯಾವುದೋ ಆರ್ಟಿಒ ಕಚೇರಿಯಲ್ಲಿ ನೋಂದಣಿಯಾದ ವಾಹನಕ್ಕೆ ಇನ್ಯಾವುದೋ ವಾಹನದ ಚಾಸ್ಸಿ ನಂಬರ್, ಇಂಜಿನ್ ನಂಬರ್ ಅಳವಡಿಸಲಾಗಿದೆ. ಫೈನಾನ್ಸ್ ಸಂಸ್ಥೆಗಳಿಂದ ಕಡಿಮೆ ಬೆಲೆಗೆ ಜಪ್ತಿಯಾದ ವಾಹನಗಳನ್ನು ಖರೀದಿಸುವವರು ಇಂಥ ಕೃತ್ಯದಲ್ಲಿ ತೊಡಗಿಕೊಂಡಿರುವುದು ಬೆಳಕಿಗೆ ಬಂದಿದೆ. ಇದೊಂದು ಜಾಲದಂತೆ ಕಾರ್ಯನಿರ್ವಹಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇನ್ನಾದರೂ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ, ವಂಚನೆಯ ಜಾಲಗಳನ್ನು ಮಣಿಸುವ ಇಚ್ಛಾಶಕ್ತಿ ತೋರಲಿ.