ತಾಳಿ ಕಟ್ಟುವ ವೇಳೆ ಕರಿಮಣಿ ಮಾಲೀಕ ನಾನು ಎಂದ ಮಾಜಿ ಪ್ರಿಯಕರ; ಮುಂದೆ ಆಗಿದ್ದೇನು?

Hassan Marriage
Published on

ಹಾಸನ: ತಾಳಿ ಕಟ್ಟುವ ವೇಳೆ ಪ್ರೇಯಸಿಯ ವಿವಾಹಕ್ಕೆ ಮಾಜಿ ಪ್ರಿಯಕರ ಎಂಟ್ರಿ ಕೊಟ್ಟ ಪರಿಣಾಮ ಮದುವೆ ಮುರಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ.

ಗುರುವಾರ (ಮಾರ್ಚ್​ 21) ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯಬೇಕಿದ್ದ ಬೇಲೂರು ಮೂಲದ ಯುವತಿ ಹಾಗೂ ಶಿವಮೊಗ್ಗ ಮೂಲದ ಯುವಕನ ಮದುವೆಯನ್ನು ಬೇರೊಬ್ಬ ಯುವಕ ಎಂಟ್ರಿ ಕೊಟ್ಟು ನಿಲ್ಲಿಸಿದ್ದಾನೆ. ಹಾಸನ ಹೊರವಲಯದ ಗವೇನಹಳ್ಳಿಯ ನವೀನ್ ಮದುವೆಗೆ ಅಡ್ಡಿಪಡಿಸಿದ ಯುವಕ ಎಂದು ತಿಳಿದು ಬಂದಿದೆ.

Hassan Marriage

ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ನವೀನ್​​ ಮದುವೆಗೆ ಅಡ್ಡಿ ಪಡಿಸಿದ್ದಾನೆ. ತಾಳಿ ಕಿತ್ತುಕೊಂಡು ಯುವತಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆ ಮದುವೆ ಮಾಡಿ ಎಂದು ಪಟ್ಟುಹಿಡಿದಿದ್ದಾನೆ. ಹೀಗಾಗಿ ಕಲ್ಯಾಣಮಂಟಪದಲ್ಲಿ ಕೆಲಕಾಲ‌ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪ್ರೀತಿ ವಿಚಾರ ತಿಳಿದು ಮದುಮಗ ಪ್ರಮೋದ್ ಕುಮಾರ್ ಮದುವೆ ಬೇಡ ಎಂದು ಕಲ್ಯಾಣ ಮಂಟಪದಿಂದ ಹೊರಟು ಹೋಗಿದ್ದಾನೆ.

ವಿಚಾರ ತಿಳಿದು ಮಧ್ಯಪ್ರವೇಶಿಸಿದ ಬೇಲೂರು ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವತಿ ತನ್ನನ್ನ ಪ್ರೀತಿಸುತ್ತಿದ್ದಳು. ತನಗೆ ವಿಚಾರ ಮುಚ್ಚಿಟ್ಟು ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದು ಯುವಕ ಆರೋಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬೇಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net