ಸಂಪಾದಕೀಯ | ರಾಜಕೀಯ ತರಬೇತಿ ಕೇಂದ್ರ; ಸ್ಥಾಪನೆ ಉದ್ದೇಶ ಉತ್ತಮ ಚಿಂತನೆ, ಆದರೆ…

MLA
Published on

ಹದಿನಾರನೇ ವಿಧಾನಸಭೆಗೆ ಆಯ್ಕೆಯಾದ ನೂತನ ಶಾಸಕರಿಗಾಗಿ ತರಬೇತಿ ಶಿಬಿರ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಬಿರವನ್ನು ಉದ್ಘಾಟಿಸಿ, ಶಾಸಕರ ಜವಾಬ್ದಾರಿ, ಕರ್ತವ್ಯ ಮತ್ತು ನಡಾವಳಿಗಳ ಕುರಿತು ತಮ್ಮ ದೀರ್ಘ ಅನುಭವದ ಹಿನ್ನೆಲೆಯಲ್ಲಿ ವಿವಿಧ ವಿಚಾರಗಳನ್ನು ಹಂಚಿಕೊಂಡರು. ಹಾಗೇ, ರಾಜಕಾರಣದ ವಾಸ್ತವ ಸಂಗತಿಗಳನ್ನು ತೆರೆದಿಟ್ಟರು. ಹಿಂದಿನ ಅನೇಕ ಘಟನೆಗಳನ್ನು ವಿವರಿಸುವ ಮೂಲಕ ಹೊಸ ಶಾಸಕರಿಗೆ ಮಾದರಿ ಶಾಸನಪಟುಗಳ ಪರಿಚಯವನ್ನೂ ಮಾಡಿಕೊಟ್ಟರು.

ಹೊಸದಾಗಿ ಆರಿಸಿ ಬಂದ ಶಾಸಕರು ಬೇರೆ ಬೇರೆ ಹಿನ್ನೆಲೆಯವರಾಗಿರುವುದರಿಂದ ಅವರಿಗೆ ಆರಂಭದಲ್ಲಿ ಇದೆಲ್ಲ ಕಕ್ಕಾಬಿಕ್ಕಿ ಎನಿಸಬಹುದು. ಅಲ್ಲದೆ ಶಾಸನಸಭೆಗಳ ಕಾರ್ಯವಿಧಾನ ಸಹ ಸಂಕೀರ್ಣವಾದುದು, ಹೀಗಾಗಿ, ಈ ಕುರಿತು ತರಬೇತಿ ಹಾಗೂ ಹಿರಿಯರ ಮಾರ್ಗದರ್ಶನ, ಸಲಹೆ ಸೂಚನೆ ದೊರೆತರೆ ಶಾಸಕತ್ವದ ಕಾರ್ಯವನ್ನು ಸಮರ್ಪಕವಾಗಿ ನೆರವೇರಿಸಲು ಸಹಾಯವಾಗುತ್ತದೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಇದೇ ಸಂದರ್ಭದಲ್ಲಿ ಚಿಂತನೆಯೊಂದನ್ನು ಹರಿಬಿಟ್ಟರು. ‘ಕರ್ನಾಟಕ ಇನ್​ಸ್ಟಿಟ್ಯೂಟ್ ಆಫ್ ಗವರ್ನೆನ್ಸ್ ಅನ್ನು ಸ್ಥಾಪಿಸುವ ಆಲೋಚನೆಯಿದೆ. ಆಡಳಿತ ನಿರ್ವಹಣೆ ತರಬೇತಿ ಎಲ್ಲರಿಗೂ ಅಗತ್ಯ’ ಎಂದು ಅವರು ಹೇಳಿದರು. ನಂತರವೂ ಅವರು ಈ ಆಲೋಚನೆಯನ್ನು ಹೇಳಿಕೊಂಡಿದ್ದಾರೆ.

‘ರಾಜಕೀಯ ಕ್ಷೇತ್ರ ಪ್ರವೇಶಿಸುವ ಆಸಕ್ತ ಪದವೀಧರ ಯುವಕರಿಗೆ ರಾಜಕೀಯ ತರಬೇತಿ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಆರು ತಿಂಗಳು ಥಿಯರಿ ಹಾಗೂ ಆರು ತಿಂಗಳು ಪ್ರಾಕ್ಟಿಕಲ್ ಸೇರಿದಂತೆ ಒಂದು ವರ್ಷದ ಕೋರ್ಸ ಆಗಿರಲಿದೆ. ಕಾಯಂ ಉಪನ್ಯಾಸಕರು ಇರಲಿದ್ದಾರೆ. ಜತೆಗೆ, ಆಗೀಗ ರಾಜಕೀಯ ಅನುಭವಿಗಳನ್ನು ಕರೆಸಿ ಉಪನ್ಯಾಸ ನೀಡಲಾಗುತ್ತದೆ. ಶಾಸಕಾಂಗದ ಎಲ್ಲ ಮಜಲುಗಳ ಬಗ್ಗೆ ಅಧ್ಯಯನಕ್ಕೆ ಅವಕಾಶ ಇರಲಿದೆ’ಎಂದು ಅವರು ವಿವರಿಸಿದ್ದಾರೆ. ಇದು ಉತ್ತಮ ಚಿಂತನೆ ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ರಾಜಕಾರಣ ಮತ್ತು ಜನಪ್ರತಿನಿಧಿಗಳ ಬಗ್ಗೆ ಜನರಲ್ಲಿ ಅಂಥ ಸಕಾರಾತ್ಮಕ ಅಭಿಪ್ರಾಯವೇನೂ ಇರದಿರುವ ಸಂದರ್ಭದಲ್ಲಿ, ಉತ್ತಮ ಜನನಾಯಕರನ್ನು ರೂಪಿಸುವಲ್ಲಿ ಇಂಥ ಹೆಜ್ಜೆಗಳು ನೆರವಾಗಬಲ್ಲವು. ಈ ಪರಿಕಲ್ಪನೆಯನ್ನು ಸೂಕ್ತವಾಗಿ ಜಾರಿಗೊಳಿಸುವ ಬದ್ಧತೆಯನ್ನು ವಿಧಾನಸಭಾಧ್ಯಕ್ಷರು ಪ್ರದರ್ಶಿಸಲಿ. ಇದು ವಿಷಯದ ಒಂದು ಆಯಾಮವಾಯಿತು.

ಇದಕ್ಕೆ ಇನ್ನೂ ಒಂದು ಮುಖವಿದೆ. ಅದೆಂದರೆ, ರಾಜಕೀಯ ಪಕ್ಷಗಳು ಕಾರ್ಯಕರ್ತರು-ನಾಯಕರನ್ನು ತಯಾರು ಮಾಡುವ ವಿಧಾನ ಹಾಗೂ ವಿವಿಧ ಚುನಾವಣೆಗಳಲ್ಲಿ ಟಿಕೆಟ್ ನೀಡುವ ಪದ್ಧತಿಯೂ ಮುಖ್ಯವಾಗುತ್ತದೆ. ಹಣ ಹಾಗೂ ತೋಳ್ಬಲ ಇರುವವರು ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ವಾತಾವರಣ ನಿರ್ವಣವಾಗಿದೆ. ಹೀಗಾಗಿ ಆಸಕ್ತಿ ಮತ್ತು ಪ್ರತಿಭೆ ಇದ್ದರೂ ಎಷ್ಟೋ ಮಂದಿ ಅವಕಾಶವಂಚಿತರಾಗಿ, ಕೊನೆಗೆ ವ್ಯವಸ್ಥೆಯ ಬಗ್ಗೆ ಭ್ರಮನಿರಸನ ಹೊಂದುವುದನ್ನು ಕಾಣುತ್ತಿದ್ದೇವೆ. ಇದರಿಂದಾಗಿ, ರಾಜಕೀಯಾಸಕ್ತಿ ಇದ್ದರು ಸಹ ಇತರ ಕ್ಷೇತ್ರಗಳವರು ಇತ್ತ ಮುಖಹಾಕಲು ಹಿಂಜರಿಯುವ ಸನ್ನಿವೇಶ ಇದೆ. ಹೀಗಾಗಿ, ರಾಜಕೀಯ ಪಕ್ಷಗಳ ಚಿಂತನೆ ಹಾಗೂ ಕಾರ್ಯವಿಧಾನದಲ್ಲಿ ಸಹ ಕೆಲ ಮೂಲಭೂತ ಬದಲಾವಣೆಗಳು ಆಗಬೇಕಾದ ಅಗತ್ಯವಿದೆ. ಗುಣಕ್ಕೆ ಮಣೆ ಹಾಕುವ ಸಂಪ್ರದಾಯ ಚಾಲ್ತಿಗೆ ಬಂದರೆ; ಚುನಾವಣೆಗಳಲ್ಲಿ ಟಿಕೆಟ್ ನೀಡುವಾಗ ಅರ್ಹತೆಗೆ ಆದ್ಯತೆ ನೀಡಿದರೆ ಆಡಳಿತ ಹಾಗೂ ಸಾರ್ವಜನಿಕ ರಂಗದಲ್ಲಿ ಒಂದಷ್ಟು ಭಿನ್ನ ವಾತಾವರಣ ನಿರೀಕ್ಷಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net