ಬಕ್ರೀದ್ ಕುರ್ಬಾನಿಗಾಗಿ ಬಾದಾಮಿಯಲ್ಲಿ ಗೋವುಗಳ ಹತ್ಯೆ; ಹಿಂದು ಸಂಘಟನೆಗಳಿಂದ ಪ್ರತಿಭಟನೆ

Badami
Published on

ಬಾಗಲಕೋಟೆ: ಬಕ್ರೀದ್ ಹಬ್ಬದಂದೇ ಬಾದಾಮಿ ಪಟ್ಟಣದ ಹೊರ ವಲಯದಲ್ಲಿ ಗೋವುಗಳು ಹತ್ಯೆಗೀಡಾಗಿರುವ ಘಟನೆ ನಡೆದಿದೆ. ಖಾಜಿ ಎಂಬುವರ ಹೊಲದಲ್ಲಿ ಗೋವುಗಳನ್ನು ಕೊಂದು ನೇತು ಹಾಕಿರುವ ದೃಶ್ಯ ಕಂಡು ಬಂದಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಚೀಲದಲ್ಲಿ ಗೋಮಾಂಸ ತುಂಬಿರುವುದು ಹಾಗೂ ಗೋವುಗಳನ್ನು ಕಡಿದು ನೇತು ಹಾಕಿರುವುದು ಬೆಳಕಿಗೆ ಬಂದಿದೆ.

ಶ್ರೀರಾಮಸೇನೆ ಕಾರ್ಯಕರ್ತರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಗೋ ಹಂತಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದೀಗ ಬಾದಾಮಿ ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಹಿಂದು ಸಂಘಟನೆ ಕಾರ್ಯಕರ್ತರು ಒಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ರಾಮದುರ್ಗ ಸರ್ಕಲ್​ನಿಂದ ಬಸವೇಶ್ವರ ಸರ್ಕಲ್​ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ಪ್ರತಿಭಟನೆ ನಡೆಸುತ್ತಾ ಹಿಂದು ಕಾರ್ಯಕರ್ತರು 'ಜೈ ಶಿವಾಜಿ, ಜೈ ಭವಾನಿ' ಎಂದು ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಎಸ್​ಪಿ ಜಯಪ್ರಕಾಶ್ ಭೇಟಿ ನೀಡಿ, ಪ್ರತಿಭಟನಾಕಾರರ ಜತೆ ಚರ್ಚೆ ನಡೆಸಿದ್ದಾರೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋ ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಹನಗಂಡಿ ಗ್ರಾಮದಲ್ಲೂ ಗೋ ಹತ್ಯೆ ಆರೋಪ

ಬಾಗಲಕೋಟೆ ಜಿಲ್ಲೆಯ ಹನಗಂಡಿ ಗ್ರಾಮದಲ್ಲೂ ಗೋ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ತೇರದಾಳ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಒಂದು ಗೋವನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು, ಎರಡು ಗೋವುಗಳನ್ನು ರಕ್ಷಣೆ ಮಾಡಲಾಗಿದೆ.

ಆರೋಪಿಗಳು ಮೂರು ಗೋವುಗಳನ್ನು ಹತ್ಯೆ ಮಾಡಲು ಮುಂದಾಗಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿ ಎರಡು ಗೋವುಗಳನ್ನು ರಕ್ಷಣೆ ಮಾಡಿದ್ದು, ಬಳಿಕ ಅವುಗಳನ್ನು ಗೋಶಾಲೆಗೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net