

ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠದಿಂದ ಗುರುವಾರ ಎರಡು ಮಹತ್ವದ ತೀರ್ಪಗಳು ಹೊರಹೊಮ್ಮಿವೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುವ ರಾಜ್ಯಪಾಲರು ಹಾಗೂ ಲೆಫ್ಟಿನೆಂಟ್ ಗವರ್ನರ್ ಕಾರ್ಯವೈಖರಿ ಕುರಿತಂತೆ ಈ ಎರಡೂ ತೀರ್ಪಗಳಲ್ಲಿ ಆಕ್ಷೇಪ ವ್ಯಕ್ತವಾಗಿರುವುದು ಕಂಡುಬರುತ್ತದೆ. ಸಾರ್ವಜನಿಕ ಭದ್ರತೆ, ಪೊಲೀಸ್ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಭೂಮಿಯ ವಿಷಯಗಳನ್ನು ಹೊರತುಪಡಿಸಿ ದೆಹಲಿ ಸರ್ಕಾರವು ಇತರೆಲ್ಲ ಸೇವೆಗಳಿಗೆ ಸಂಬಂಧಿಸಿದ ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಸರ್ವಾನುಮತದ ತೀರ್ಪು ನೀಡಿರುವುದು ಕೇಂದ್ರ ಹಾಗೂ ದೆಹಲಿ ಸರ್ಕಾರಗಳ ನಡುವಿನ ತಿಕ್ಕಾಟಕ್ಕೆ ಲಕ್ಷ್ಮಣ ರೇಖೆಯನ್ನು ಎಳೆದಂತಾಗಿದೆ.
ಯಾವ್ಯಾವ ವಿಷಯದಲ್ಲಿ ಯಾವ್ಯಾವ ಸರ್ಕಾರಗಳು ಅಧಿಕಾರ ಹೊಂದಿವೆ ಎಂಬ ಸ್ಪಷ್ಟತೆಯುಳ್ಳ ತೀರ್ಪು ನೀಡಿರುವುದು ಸುಗಮ ಆಡಳಿತ ನಡೆಸಲು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಅನುಕೂಲಕರವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ದೆಹಲಿಯ ಸೇವಾ ವಿಷಯಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರ ಹಾಗೂ ದೆಹಲಿ ಸರ್ಕಾರಗಳ ನಡುವಿನ ವಿವಾದದ ವಿಚಾರಣೆ ನಡೆಸಿದ ಸಂವಿಧಾನ ಪೀಠವು ಆಡಳಿತಾತ್ಮಕ ವಿಷಯಗಳಲ್ಲಿ ಕೇಂದ್ರದ ಪ್ರಾಮುಖ್ಯತೆಯು ಒಕ್ಕೂಟ ವ್ಯವಸ್ಥೆ ಮತ್ತು ಪ್ರಾತಿನಿಧಿಕ ಪ್ರಜಾಪ್ರಭುತ್ವ ತತ್ವಕ್ಕೆ ಧಕ್ಕೆ ತರುತ್ತದೆ.
ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರಕ್ಕೆ ಅಧಿಕಾರ ಇರುತ್ತದೆ. ಹೀಗಾಗಿ ದೆಹಲಿ ಸರ್ಕಾರದ ನಿರ್ಧಾರಕ್ಕೆ ಲೆಫ್ಟಿನೆಂಟ್ ಗವರ್ನರ್ ಬದ್ಧವಾಗಬೇಕು ಎಂದಿರುವುದು ಆಮ್ ಆದ್ಮಿ ಪಾರ್ಟಿ ಸರ್ಕಾರಕ್ಕೆ ಮೇಲುಗೈ ತಂದುಕೊಟ್ಟರೆ, ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯವೈಖರಿಗೆ ಚಾಟಿ ಬೀಸಿದಂತಿದೆ. ರಾಷ್ಟ್ರದ ರಾಜಧಾನಿ ಆಗಿರುವುದರಿಂದ ದೆಹಲಿ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವ ಕುರಿತಂತೆ ವಿವಾದಗಳು ಆಗಾಗ್ಗೆ ಉದ್ಭವಿಸುತ್ತಲೇ ಇರುತ್ತವೆ. ಸರ್ಕಾರದ ಜಾಹೀರಾತು ದುಂದುವೆಚ್ಚ, ಹಜ್ ಸಮಿತಿ ನೇಮಕ, ಫಿನ್ಲೆಂಡ್ಗೆ ಶಿಕ್ಷಕರ ತರಬೇತಿ, ದೆಹಲಿ ಮಹಾನಗರ ಪಾಲಿಕೆ ಕಸ ವಿಲೇವಾರಿ... ಹೀಗೆ ಹಲವು ವಿಷಯಗಳ ಕುರಿತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗನರ್ವರ್ ವಿ.ಕೆ. ಸಕ್ಸೇನಾ ನಡುವೆ ತಕರಾರುಗಳು ತಾರಕಕ್ಕೇರಿ, ಈ ವಿಷಯ ಕೋರ್ಟ್ ಅಂಗಳ ತಲುಪಿತ್ತು.
ಇನ್ನೊಂದೆಡೆ, ಮಹಾರಾಷ್ಟ್ರದಲ್ಲಿ ವಿಶ್ವಾಸಮತ ಸಾಬೀತುಪಡಿಸದೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರಿಂದ ಠಾಕ್ರೆ ಬಣದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದ ಮರುಸ್ಥಾಪನೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ- ಬಿಜೆಪಿ ಸರ್ಕಾರ ಮುಂದುವರಿಯುವುದನ್ನು ಖಚಿತಪಡಿಸಿದರೂ ನೈತಿಕವಾಗಿ ಹಿನ್ನಡೆ ಎಂದೇ ಅರ್ಥೈಸಬಹುದಾಗಿದೆ. ಉಧ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರಿಂದ ಶಿಂಧೆ ನೇತೃತ್ವದ ಬಣವನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವ ರಾಜ್ಯಪಾಲರ ಕ್ರಮ ಸರಿಯಾಗಿತ್ತು. ಆದರೆ, ಠಾಕ್ರೆ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಭಾವಿಸಿ ಸದನದಲ್ಲಿ ಬಹುಮತ ಸಾಬೀತುಪಡಿಸಲು ಆದೇಶಿಸಿದ್ದು ಸರಿಯಾದ ನಿರ್ಧಾರವಲ್ಲ ಎಂದು ರಾಜ್ಯಪಾಲರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ಎರಡೂ ಪ್ರಕರಣಗಳಲ್ಲಿನ ತೀರ್ಪು ಸಾಂವಿಧಾನಿಕ ಹುದ್ದೆಗಳಲ್ಲಿರುವವರು ಅವಲೋಕನ ಮಾಡಿಕೊಳ್ಳುವಂತಿದೆ.