ಪುತ್ರಿ ಹತ್ಯೆಗೈದ ದಂಪತಿ; ಗೋಡೆ ಮೇಲೆ ಕಾರಣ ಬರೆದು ಸಾವಿಗೆ ಶರಣು!

Untitled design (94)
Published on

ಹೈದರಾಬಾದ್: ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ದಂಪತಿಗಳು ತಮ್ಮ ನಾಲ್ಕು ವರ್ಷದ ಮಗಳಿಗೆ ನೇಣು ಬಿಗಿದು, ಬಳಿಕ ತಾವು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನ ಮುಶೀರಾಬಾದ್ ವರದಿಯಾಗಿದೆ.

ನಗರದ ಮುಶೀರಾಬಾದ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ದಂಪತಿಗಳಾದ ಸಾಯಿಕೃಷ್ಣ ಮತ್ತು ಚಿತ್ರಕಲಾ ತಮ್ಮ ಮಗಳು ತೇಜಸ್ವಿಯನ್ನು ಗಂಗಾಪುತ್ರ ಕಾಲೋನಿಯಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ನಂತರ ಆತ್ಮಹತ್ಯೆಯ ಕಾರಣವನ್ನು ಗೋಡೆಯ ಮೇಲೆ ಬರೆದು ಸಾವಿಗೀಡಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದ ಒಂದು ದಿನದ ಬಳಿಕ ಅನುಮಾನಗೊಂಡ ನೆರೆಹೊರೆಯವರು ಮನೆಯ ಬಾಗಿಲನ್ನು ಬಡಿದಿದ್ದಾರೆ. ನಿರಂತರವಾಗಿ ಡೋರ್​ ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಬಾಗಿಲು ಒಡೆದು ನೋಡಿದಾಗ ಮೂವರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಕಠಿಣ ನಿರ್ಧಾರದ ಹಿಂದಿದ್ದ ಕಾರಣವನ್ನು ಗೋಡೆಯ ಮೇಲೆ ಬರೆದಿದ್ದಾರೆ. ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಚಿತ್ರಕಲಾ ಅವರನ್ನು ಖಾಸಗಿ ಸಂಸ್ಥೆಯಲ್ಲಿ ಕೆಲಸದಿಂದ ವಜಾಗೊಳಿಸಲಾಗಿತ್ತು. ತನಗೆ ಅನ್ಯಾಯವಾಗಿದೆ ಮತ್ತು ಉನ್ನತ ಮಟ್ಟದಲ್ಲಿ ಮನವಿ ಮಾಡಿದರೂ ನ್ಯಾಯ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಚಿತ್ರಕಲಾ ಪತಿ ಸಾಯಿಕೃಷ್ಣ ಆ್ಯಪ್ ಆಧಾರಿತ ಸೇವೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆಯ ಪರಿಶೀಲನೆ ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net