

ಬೆಂಗಳೂರು: ಸಾಮಾನ್ಯವಾಗಿ ನಮಗೆ ನಿಮೆಗೆಲ್ಲಾ ತಿಳಿದಿರುವಂತೆ ಪ್ರತಿಯೊಬ್ಬ ರೈತನು ಕೂಡ ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಫಸಲು ಬರುವವರೆಗೂ ಅದನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ವಿಧವಿಧವಾದ ಪ್ರಯತ್ನಗಳನ್ನು ಪ್ರಯೋಗಿಸುವಲ್ಲಿ ನಿರತರಾಗಿರುತ್ತಾರೆ.
ಪ್ರತಿ ಬೆಳೆಗೂ ಪ್ರಾಣಿ-ಪಕ್ಷಿಗಳ ಹಾವಳಿ ಇದ್ದೇ ಇರುತ್ತದೆ. ಇದನ್ನು ರೈತರೂ ಕೂಡ ತಪ್ಪು ಎನ್ನುವುದಿಲ್ಲ. ಆದ್ರೆ, ಫಸಲು ಉಳಿಸಿಕೊಳ್ಳುವುದು ಮಾತ್ರ ರೈತಾಪಿ ವರ್ಗದ ಮುಖ್ಯ ಉದ್ದೇಶವಾಗಿರುತ್ತದೆ. ಈ ಪೈಕಿ ಇಲ್ಲೊಬ್ಬ ರೈತ ಮಾಡಿರುವ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದು, ವ್ಯಾಪಕ ಮೆಚ್ಚುಗೆ ಸೂಚಿಸಿದ್ದಾರೆ.
ವಿವಿಧ ಬಗೆಯ ಬೆಳೆಗಳನ್ನು ಕಾಣುತ್ತಿದ್ದಂತೆ ಪ್ರಾಣಿ-ಪಕ್ಷಿಗಳು ಅದನ್ನು ತಿನ್ನುವ ಮುಖೇನ ಅದರ ಬೆಳವಣಿಗೆಯನ್ನು ಹಾಳು ಮಾಡುತ್ತದೆ. ಸತತ ಏಳು ತಿಂಗಳು, ಒಂದು ವರ್ಷಗಳ ನಿರಂತರ ಶ್ರಮವನ್ನು ವ್ಯರ್ಥ ಮಾಡಿಕೊಳ್ಳಲು ಬಯಸದ ರೈತ, ಬೆಳೆದ ಬೆಳೆಗೆ ಮುಳ್ಳಿನ ಬೇಲಿ, ವಿದ್ಯುತ್ ತಂತಿ, ಕಲ್ಲು ಕಂಬದ ಜತೆ ಪರದೆ, ಶೀಟ್, ವಾಸನೆ ಭರಿತ ಔಷಧಿ, ಬೆದರು ಬೊಂಬೆಗಳನ್ನು ಬಳಸುವ ಮೂಲಕ ಪ್ರಾಣಿಗಳ ದಾಳಿಯನ್ನು ತಡೆಯುವ ಪ್ರಯತ್ನ ಮಾಡುತ್ತಾನೆ. ಆದ್ರೂ, ಹಲವೊಮ್ಮೆ ಈ ಪ್ರಯತ್ನಗಳು ವಿಫಲವಾಗುತ್ತದೆ.
ಇದೀಗ ಇಲೊಬ್ಬ ರೈತ ಸೈಕಲ್ಗೆ ಅಳವಡಿಸುವ ಹ್ಯಾಂಡಲ್ ಬಾರ್ ಬಳಸಿಕೊಂಡು ಅದಕ್ಕೆ ಜಪ್ಪಿಂಗ್ ಸ್ಪ್ರಿಂಗ್ ಜೋಡಿಸಿ, ಮೇಲೆ ಮತ್ತು ಕೆಳಗೆ ಕುಣಿಯುವಂತೆ ಮಾಡಿದ್ದಾರೆ. ಮಾನವನಂತೆಯೇ ಇರುವ ಗೊಂಬೆಯೊಂದನ್ನು ನಿರ್ಮಿಸಿ, ಅದರ ತೋಳುಗಳನ್ನು ಹ್ಯಾಂಡಲ್ನ ಎರಡು ಕೊನೆಗೆ ಕಟ್ಟಿ ಹಾರಡಲು ಬಿಟ್ಟಿದ್ದಾರೆ.
ಇದು ಗಾಳಿಗೆ ತಕ್ಕಂತೆ ಸುತ್ತಮುತ್ತಲೂ ತಿರುಗುವುದರಿಂದ ಯಾರೋ ಒಬ್ಬರು ಓಡಾಡುತ್ತಿದ್ದಾರೆ ಎಂದೇ ಭಾಸವಾಗುತ್ತದೆ. ಈ ರೀತಿ ಪ್ರಾಣಿ-ಪಕ್ಷಿಗಳ ಹಾವಳಿಯಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳುವ ರೈತನ ಈ ಒಂದು ಪ್ರಯತ್ನ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋಗೆ ವ್ಯಾಪಕ ಮೆಚ್ಚುಗೆ ಮತ್ತು ಲೈಕ್ಗಳು ದೊರೆತಿವೆ.