More

    ಕೃಷಿ ಮೇಳದಲ್ಲಿ ಹರಿದು ಬಂದ ಜನ ಸಾಗರ: ಗಮನ ಸೆಳೆಯುತ್ತಿವೆ ವಿವಿಧ ಮಳಿಗೆಗಳು

    ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ‘ಕೃಷಿ ಮೇಳದ’ 2ನೇ ದಿನ ಜನಸಾಗರವೇ ಹರಿದ್ದು ಬಂದಿದ್ದು, ವಾರಾಂತ್ಯ ಹಿನ್ನೆಲೆಯಲ್ಲಿ ಶನಿವಾರ 5.48 ಲಕ್ಷ ಮಂದಿ ಭೇಟಿ ನೀಡಿದರು. 1.38 ಕೋಟಿ ರೂ.ವಹಿವಾಟು ನಡೆದಿದೆ. 9,620 ಮಂದಿ ರಿಯಾಯಿತಿ ದರದಲ್ಲಿ ಭೋಜನ ಸೇವಿಸಿದರು.

    ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಶಾಲಾ ಮಕ್ಕಳು, ಕೃಷಿ ಮೇಳವನ್ನು ನೋಡಿ ಪುಳಕಿತರಾದರು. ಮೇಳದಲ್ಲಿ ಬೆಳೆದಿದ್ದ ಹೂವಿನ ಬೆಳೆಗಳು, ತರಕಾರಿಗಳು, ಧಾನ್ಯಗಳು, ಪಶು ಸಂಗೋಪನೆ ವಿಭಾಗದಲ್ಲಿ ಉದ್ದ ಕಿವಿಯ ಮೇಕೆಗಳು, ದುಬಾರಿ ಬೆಲೆಯ ಹಳ್ಳಿಕಾರ್ ಹೋರಿ, ಆಕರ್ಷಕ ಕತ್ತಿನ ಟರ್ಕಿ ಕೋಳಿ, ಸಿರಿಧಾನ್ಯಗಳ ಮನೆ, ನರ್ಸರಿಯಲ್ಲಿನ ಸಸಿ ಕಂಡು ವಿದ್ಯಾರ್ಥಿಗಳು ಸಂಭ್ರಮಪಟ್ಟರು. ಕೃಷಿಯಲ್ಲಿ ಇಷ್ಟೆಲ್ಲಾ ಆವಿಷ್ಕಾರಗಳಿವೆ ಎಂಬುದನ್ನು ಇವತ್ತೇ ತಿಳಿದಿದ್ದು ಎಂದು ವಿದ್ಯಾರ್ಥಿಗಳು ಆಶ್ಚಯಚಕಿತಗೊಂಡರು. ಆದಾಯವನ್ನು ದ್ವಿಗುಣಗೊಳಿಸಲು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳುವುದು, ಎಕರೆ ಜಮೀನಿನಲ್ಲಿ 10 ಬೆಳೆ ಬೆಳೆಯುವುದು, ಸಾವಯವ ಕೃಷಿಗೆ ಹೆಚ್ಚು ಒತ್ತುಕೊಡುವುದು, ರೈತರ ಮನೋಭಾವ ಬದಲಾಗಬೇಕು. ಉತ್ಪನ್ನಗಳನ್ನು ಪೊಟ್ಟಣ ಮಾಡಿ ನೇರವಾಗಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದನ್ನು ಕಲಿಯಬೇಕು ಹಾಗೂ ಕೃಷಿ ವಿವಿಯ ತಜ್ಞರು ನಡೆಸುವ ತಂತ್ರಜ್ಞಾನಗಳು ರೈತರಿಗೆ ತಲುಪಿದರೆ ಬೆಳೆ ಬೆಳೆಯುವ ಅನ್ನದಾತ ಆರ್ಥಿಕವಾಗಿ ಸಧೃಡಗೊಳ್ಳುತ್ತೇನೆ ಎಂದು ಒಟ್ಟಾರೆ ಮೇಳದ ಸಾರವಾಗಿತ್ತು.

    ಆಕರ್ಷಣೆ ಕೋಳಿ ಪ್ರಪಂಚ:
    ಕುಕ್ಕಟ ಪಶುವೈದ್ಯರ ಸಂಘದಿಂದ ಮೇಳದಲ್ಲಿ ಪ್ರತಿಷ್ಠಾಪಿಸಿರುವ ‘ಕೋಳಿ ಪ್ರಪಂಚ’ ಮಳಿಗೆ ನೋಡುಗರ ಆಕರ್ಷಣೆ ಕೇಂದ್ರವಾಗಿದೆ. ಗಿರಿರಾಜ, ಸ್ವರ್ಣಧಾರ, ನಾಟಿಕೋಳಿ, ರಾಜ-2, ಕಳಿಂಗ ಬೌನ್, ವೈಟ್ ಪೆಕಿನ್, ಅಸಿಲ್ ಕ್ರಾಸ್ ಸೇರಿ ವಿವಿಧ ಮಾದರಿ ತಿಳಿಯ ಕೋಳಿಗಳನ್ನು ಜನರು ವೀಕ್ಷಿಸಿ ಖುಷಿಪಟ್ಟರು.ಎಷ್ಟು ತಿಂಗಳಿಗೆ ಕೋಳಿ ದಪ್ಪ ಆಗಲಿದೆ,ಯಾವ ತಳಿಗೆ ಬೇಡಿಕೆ ಇದೆ, ಸಾಕಲು ತಗಲುವ ವೆಚ್ಚವೆಷ್ಟು ಹಾಗೂ ಕೆಜಿ ಮಾಂಸಕ್ಕೆ ದರ ಎಷ್ಟಿದೆ ಎಂಬಿತ್ಯಾದಿ ಮಾಹಿತಿಗಳನ್ನು ಕೋಳಿ ಸಾಕುವವರು ಮಳಿಗೆ ಸಿಬ್ಬಂದಿಯಿಂದ ಪಡೆದರು.

    ಸಲಹಾ ಸೇವಾಗಳ ಕೂಟ ಸದ್ಬಳಕೆ:
    ಮೇಳದಲ್ಲಿ ಸ್ಥಾಪಿಸಿರುವ ಸಲಹಾ ಸೇವಾಗಳ ಕೂಟಕ್ಕೆ ಎರಡು ದಿನದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ವಿವಿಧ ಮಾಹಿತಿಗಳನ್ನು ಕೃಷಿ ವಿಜ್ಞಾನಿಗಳಿಂದ ಪಡೆದುಕೊಂಡರು. ‘ಬೇಸಾಯಶಾಸ’, ‘ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನಶಾಸ’, ‘ತೋಟಗಾರಿಕೆ’, ‘ಅನುವಂಶಿಯತೆ ಮತ್ತು ಸಸ್ಯಗಳಶಾಸ’, ‘ಪರಿಸರ ವಿಜ್ಞಾನ ವಿಭಾಗ’, ‘ಬೆಳೆ ಶರೀರ ಕ್ರಿಯಾಶಾಸ’, ‘ಕೃಷಿ ಕೀಟಶಾಸ’, ‘ಸಸ್ಯ ರೋಗಶಾಸ’, ‘ಜೇನು ಕೃಷಿ’, ‘ರೇಷ್ಮೆ ಕೃಷಿ’, ‘ಪ್ರಾಣಿ ವಿಜ್ಞಾನ ವಿಭಾಗ’, ‘ಆಹಾರ ವಿಜ್ಞಾನ ಮತ್ತು ಮಣ್ಣು’, ‘ಕೃಷಿ ಅರ್ಥಶಾಸ ವಿಭಾಗ’ ಸ್ಟಾಲ್‌ಗಳಿಗೆ ರೈತರು ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದರು. ಸಲಹಾ ಸೇವಾಗಳ ಕೂಟದಲ್ಲಿ ಪ್ರತಿಷ್ಠಾಪಿಸಿರುವ ಒಂದೊಂದು ಪ್ರಾತ್ಯಕ್ಷಿಕೆ ಕೇಂದ್ರಗಳಲ್ಲಿ ಜಿಕೆವಿಕೆಯ ಕೃಷಿ ವಿಜ್ಞಾನಿಗಳು ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಿದರು. ಹೆಚ್ಚಿನ ರೈತರು ಸಸ್ಯ ತಂತ್ರಜ್ಞಾನ, ಪ್ರಾಣಿ ವಿಜ್ಞಾನ, ಬೇಸಾಯಶಾಸ, ತೋಟಗಾರಿಕೆ, ಕೃಷಿ ವಿಜ್ಞಾನ ಸಂಬಂಧಿಸಿದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದು ಗಮನಾರ್ಹ.

    ಹವಾಮಾನ ಆಧಾರಿತ ಬೇಳೆ ಮಾಹಿತಿ:
    ಮೇಳದಲ್ಲಿ ತೆರೆದಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಳಿಗೆಗಳ ಕೇಂದ್ರದಲ್ಲಿ ಶನಿವಾರ ಹೆಚ್ಚಿನ ಭೇಟಿ ನೀಡಿದ್ದರು. ಇದರ ಪರಿಣಾಮ ಕೆಲವೆಡೆ ಜನರು ನೂಕುನೂಗ್ಗಲು ಉಂಟಾಯಿತು. ಕೃಷಿ ವಿಭಾಗ, ಹವಾಮಾನ ಆಧಾರಿತ ಬೀಜ ಬಿತ್ತನೆ, ನೀರು ನಿರ್ವಹಣಾ ತಂತ್ರಜ್ಞಾನ ಕೇಂದ್ರ, ಜೋಳ, ಮಣ್ಣು, ಜಲಾಶಯನ, ಭತ್ತ, ಸಸ್ಯಸಂರಕ್ಷಣೆ, ರೇಷ್ಮೆ, ಎಣ್ಣೆಕಾಳು, ದ್ವಿದಳ ಧಾನ್ಯ, ಕೀಟಶಾಸ, ವಾಣಿಜ್ಯ ಬೆಳೆ, ಕಳೆ ನಿರ್ವಹಣೆ, ಜೈವಿಕ ಗೊಬ್ಬರ, ಜೀಜ ತಾಂತ್ರಿಕತೆ, ಜೈವಿಕ ಇಂಧನ, ಕಬ್ಬು ಪ್ರಾತ್ಯಕ್ಷಿಕ ಕೇಂದ್ರಗಳಿಗೆ ಸಾಕಷ್ಟು ಮಂದಿ ಭೇಟಿ ನೀಡಿದರು. ಆಯಾ ಪ್ರಾತ್ಯಕ್ಷಿಕ ಕೇಂದ್ರಗಳಲ್ಲಿ ಬೆಳೆಗಳ ಕುರಿತು ಮಾಹಿತಿ ಲಕ ಹಾಕಲಾಯಿತು.ತಳಿಯ ಹೆಸರು, ಬೆಳೆಯುವ ದಿನಗಳ ಅವಧಿ, ಇಳುವರಿ, ಯಾವ ತಿಂಗಳಲ್ಲಿ ಬೀಜ ಬಿತ್ತನೆ ಮಾಡಬೇಕು, ಹಿಂಗಾರು, ಮುಂಗಾರು ಸಂದರ್ಭದಲ್ಲಿ ಯಾವ್ಯಾವ ಬೆಳೆ ಬೆಳೆಯಬೇಕು, ಹವಾಮಾನ ವೈಪರಿತ್ಯ ಸಮಸ್ಯೆಯಿಂದ ಬೆಳೆ ರಕ್ಷಿಸಿಕೊಳ್ಳುವುದು ಹೇಗೆ, ಕಳೆಯಿಂದ ಬೆಳೆ ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಕೃಷಿ ವಿಜ್ಞಾನಿಗಳು ನೀಡಿದರು.

    ಮೊಟ್ಟೆ ಫ್ಲೆಕ್ಸ್​​
    ಮೊಟ್ಟೆಯಲ್ಲಿ ಅಧಿಕ ಪೋಷಕಾಂಶ ಇರುತ್ತದೆ. ಆದರೂ, ಸಸ್ಯಾಹಾರಿ ತಿನ್ನುವವರು ಇದನ್ನು ತಿನ್ನಲು ಹಿಂಜರಿಯುತ್ತಾರೆ. ಕೆಲವರಿಗೆ ವಾಸನೆ ಬಂದರೆ ವಾಕರಿಕೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಮೊಟ್ಟೆಯ ಹಳದಿ ಭಾಗವನ್ನು ಪಕ್ಕಕ್ಕಿಡುತ್ತಾರೆ. ಇಂಥವರಿಗಾಗಿಯೇ ಕೃಷಿ ಮೇಳದಲ್ಲಿ ಬಂದಿವೆ ಮೊಟ್ಟೆಯ ಫ್ಲೆಕ್ಸ್​​. ಮೊಟ್ಟೆಯ ಹಳದಿ ಭಾಗದಿಂದ ಮೊಟ್ಟೆ ಫ್ಲೆಕ್ಸ್​​ ತಯಾರಿಸಲಾಗಿದೆ. ತಂಜಾವೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ಯಂಡ್​ ಟೆಕ್ನಾಲಜಿಯ ಎಂಟರ್‌ಪ್ರಿನರ್‌ಶಿಪ್ ಆ್ಯಂಡ್ ಮ್ಯಾನೇಜ್‌ಮೆಂಟ್ ಮೊಟ್ಟೆ ಫ್ಲೆಕ್ಸ್​​ ಸಂಸ್ಕರಿಸಿ ತಯಾರಿಸಿದೆ. ಇದು ವಾಸನೆ ಬರುವುದಿಲ್ಲ. ಮಕ್ಕಳಿಂದ ದೊಡ್ಡವರೆಗೆ ಹಾಲಿನಲ್ಲಿ ಮಿಶ್ರಣ ಮಾಡಿಕೊಂಡು ಸೇವಿಸಬಹುದು ಎಂದು ಸಂಸ್ಥೆಯ ಪ್ರಾಧ್ಯಾಪಕ ಸುನಿಲ್ ಮಾಹಿತಿ ನೀಡಿದರು.

    ಸ್ತಬ್ದ ಚಿತ್ರಗಳ ಆಕರ್ಷಣೆ
    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೃಷಿ ಮೇಳದಲ್ಲಿ ಸ್ಥಾಪಿಸಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಹಾಗೂ ಯುವನಿಧಿ ಬಗ್ಗೆ ಬೆಳಕು ಚೆಲ್ಲುವ ಸ್ತಬ್ದ ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿದೆ. ಪೈರು ನಾಟಿ ಮಾಡುವುದು, ಎತ್ತಿನ ಗಾಡಿಯಲ್ಲಿ ದಿನಸಿ ಮೂಟೆಗಳನ್ನು ಹೊತ್ತು ಹೊರಡುವ ದೃಶ್ಯ, ಪಡಿತರ ವಿತರಣೆ ವ್ಯವಸ್ಥೆಗಳ ಸ್ತಬ್ಧ ಚಿತ್ರಗಳು ಆಕರ್ಷಣೆ ಕೇಂದ್ರಗಳಾಗಿವೆ. ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದ ದೃಶ್ಯ ಕಂಡುಬಂತು.

    40 ರೂ.ಗೆ ಮುದ್ದೆ ಊಟ
    ಪ್ರತಿ ಬಾರಿಯಂತೆ ಈ ಬಾರಿಯೂ ಕೃಷಿ ಮೇಳದಲ್ಲಿ ರೈತರು ಹಾಗೂ ರೈತಯೇತರರಿಗೆ ರಿಯಾಯಿತಿ ದರದಲ್ಲಿ ಮುದ್ದೆ ಊಟ ನೀಡಲಾಯಿತು. 40 ರೂ.ಗೆ ಬಿಸಿ ರಾಗಿ ಮುದ್ದೆ, ಕಾಳಿನ ಸಂಬಾರು, ಅನ್ನ, ರಸಂ, ಮೊಸರನ್ನ, ಬೇಯಿಸಿದ ಮೊಟ್ಟೆ ಮತ್ತು ಬಾದುಶ ಸೇರಿ ಊಟವನ್ನು ಜನರು ಸೇವಿಸಿದರು.
    ಜಿಕೆವಿಕೆ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಹಲವು ಉಸ್ತುವಾರಿಗಳನ್ನು ನಿಭಾಯಿಸಿದ್ದರು.

    ಗಂಟೆಗೆ ಸಾವಿರ ಕೆಜಿ ಹುಲ್ಲು ಕತ್ತರಿಸುವ ಯಂತ್ರ:
    ಹಸು,ಮೇಕೆ, ಕುರಿ ಮತ್ತಿತರ ಜಾನುವಾರುಗಳಿಗೆ ಮೇವು ಕಟಾವು ಮಾಡುವ ಯಂತ್ರ ರೈತರ ಗಮನ ಸೆಳೆಯುತ್ತಿತ್ತು. ಅಗ್ರಿ ಶೈನ್ ಎಂಬ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಗೇರ್ ಯಂತ್ರ 27 ಸಾವಿರ ರೂ.ಇದೆ. ಗಂಟೆಗೆ ಬರೋಬ್ಬರಿ 800-1,000 ಕೆಜಿ ಕತ್ತರಿಸಬಹುದು. ಹಸಿ ಮತ್ತು ಒಣ ಹುಲ್ಲು, ತೆಂಗಿನ ಗರಿ, ಅಡಿಗೆ ಗರಿಗಳನ್ನು ಕೂಡ ಕತ್ತರಿಸಬಹುದು.

    ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ:
    ಮಣ್ಣು ಮತ್ತು ನೀರು ಕುರಿತು ಸಾರ್ವಜನಿಕರು ಅರಿವು ಮೂಡಿಸುವ ನಿಟ್ಟಿನಲ್ಲಿ ವೇದಿಕೆ ಸಭಾಂಗಣದ ಪಕ್ಕದಲ್ಲಿ ಕೃಷಿ ವಿಶ್ವವಿದ್ಯಾಲಯದ ಮಳಿಗೆಗಳ ಕೇಂದ್ರದಲ್ಲಿ ಪ್ರತಿಷ್ಠಾಪಿಸಿರುವ ‘ನಮ್ಮ ಮಣ್ಣು-ನಮ್ಮ ಹೆಮ್ಮೆ’ ಪ್ರಾತ್ಯಕ್ಷಿಕೆ ಮುಂಭಾಗದಲ್ಲಿ ಹೆಚ್ಚಿನ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts